ನಾ ಕಂಡ-ಕಮಲದ ಕಣ್ಣುಗಳು.
ಭಾಗ-೨
ನನ್ನ ತಂದೆಯವರದ್ದು ಒಂದು ಸ್ವಭಾವವಾದರೆ ದೊಡ್ಡಪ್ಪನವರದು ಇನ್ನೊಂದು ಬಗೆ.
ತಂದೆಯವರದು ಸ್ವಲ್ಫ ಅತಿ ಭಾವುಕತನ. ಆಧುನಿಕ ಭಾಷೆಯಲ್ಲಿ ಹೇಳಿದರೆ ಎಡ ಮೆದುಳು, ದೊಡ್ಡಪ್ಪನವರದು ಬಲ ಮೆದುಳು, ಸ್ವಲ್ಪ ತಾರ್ಕಿಕ ತಲೆ.
ನನ್ನ ತಂದೆಯವರು ಯಾರಿಗೂ ಹೆದರುವುದಿಲ್ಲ. ಹಾಗಂತ ದೊಡ್ಡಪ್ಪನವರ ಮುಂದೆ ಅವರಿಗೆ ಸ್ವರವೇ ಬರುವುದಿಲ್ಲ!ಅದೊಂದು ಮೌನದ ಸಂಬಂಧ.
ನನ್ನ ತಂದೆಯವರಿಗೆ ವಯಸ್ಸಾದ ಮೇಲೆ ನಾವು ಹೇಳಿದ್ದನ್ನು ಕೇಳದೇ ಇದ್ದಾಗ ನಾನು ನನ್ನ ತಂದೆಯವರನ್ನು ಹೆದರಿಸಲು ಬಳಸುತ್ತಿದ್ದ ಅಸ್ತ್ರವೆಂದರೆ-ದೊಡ್ಡಪ್ಪನವರಲ್ಲಿ ಹೇಳುತ್ತೇನೆ.!
ಕೊನೆಗೊಂದು ದಿನ ಊರಿಗೆ ಹೋದಾಗ ತಂದೆಯವರ ಮುಂದೆಯೇ ಅವರ ದೂರು ನೀಡಿದ್ದೆ. ಅಂದು ದೊಡ್ಡಪ್ಪ ತಾಳ್ಮೆಯಿಂದ ನನ್ನ ತಂದೆಯವರಿಗೆ ಮೂರು ಮಾತು ಹೇಳಿದ್ದರು. ಅದು ಪ್ರಯೋಜನವಾಗಲಿಲ್ಲ ಎಂಬುದು ಬೇರೆ ಮಾತು.ಆದರೆ ದೊಡ್ಡಪ್ಪ ಮಾತನಾಡುವಾಗ ಇವರು ಕೆಳಗೆ ನೋಡಿ ಸುಮ್ಮನಿದ್ದರು ಹೊರತು ಏನೂ ಪ್ರತಿಕ್ರಿಯಸಲಿಲ್ಲ.
********************
ದೊಡ್ಡಪ್ಪನವರಿಗೆ ಸರಕಾರಿ ಕಛೇರಿಯ ಕಾನೂನು ನಿಯಮಗಳ ಬಗ್ಗೆ ಅರಿವಿತ್ತು. ಅವರು ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದರು. ನನ್ನ ತಂದೆಯವರು ಸರಕಾರಿ ನೌಕರರಾದ ಕಾರಣ, ಕಾನೂನಿನ ತಿಳಿವು ಅವರಿಗೂ ಇತ್ತು. ಕೆಲವೊಮ್ಮೆ ಚರ್ಚೆಯಾದಾಗ ನಾನು ಗಮನಿಸಿದ್ದು- ದೊಡ್ಡಪ್ಪ ಹೇಳಿದ್ದು ತಪ್ಪಾದರೂ, ಅದನ್ನು ನನ್ನ ತಂದೆ ವಿರೋಧಿಸುತ್ತಿರಲಿಲ್ಲ. ಹಾಗಂತ ಒಪ್ಪುತ್ತಿರಲಿಲ್ಲ.!
***************************************************************
ಊರಿಗೊಂದು ಸರಕಾರಿ ಸಿಟಿ ಬಸ್ ಇತ್ತು. ಶಾಲೆಗೆ ಹೋಗುವವರಿಗೆ ಅನುಕೂಲವಾಗುವಂತೆ ಅದರ ಸಮಯ. ಹಾಗೆಂದು ಅದು ಬಂದರೆ ಬಂತು. ಹೋಗುವುದೂ ಅದರಿಷ್ಟದಂತೆ. ಅದೊಂದು ದಿನ ದೊಡ್ಡಪ್ಪ ಅಂಗಡಿಯಲ್ಲಿ ಕೂತಿದ್ದರು, ನಾನು ಅವಾರಡಿದ ಮಾತುಗಳಿಗೆ ಕಿವಿಯಾಗುತ್ತಿದ್ದೆ, ಸಿಟಿ ಬಸ್ಸು ಬಂತು, ಸಮಯಕ್ಕೆ ಮೊದಲೇ ಹೋಯಿತು. ಅದೇ ಬಸ್ಸಿಗಾಗಿ ಸಮಯ ಹೊಂದಿಸಿ ಬಂದವನೊಬ್ಬ ನೋಡುತ್ತಿರುವಂತೆಯೇ ಬಸ್ಸು ಹೋಯಿತು. ಅವನು ಅಂಗಡಿಯ ಬಳಿ ಬಂದವನೇ ಬಸ್ಸನ್ನು ಬೈಯಲಾರಂಭಿಸಿದ, 'ಸಮಯ ಅಂತ ಇಲ್ಲ, ಅದಕ್ಕಿಂತ ಮೊದಲೇ ಹೇಗೆ ಹೋದ ಅವನು' ಎಂದೆಲ್ಲ.. ಅಗ ದೊಡ್ಡಪ್ಪ ಅ ಬಸ್ಸಿನ ವಿಷಯ ಹೇಳಿದರು.
ಅದು ಸರಕಾರಿ ಬಸ್ಸು ಬೇರೆ. ಕೇಳುವವರು ಯಾರೂ ಇಲ್ಲ. ಬಂದರೆ ಬಂದ. ಮನಸ್ಸಾದಾಗ ಹೋದ. ಕೆಲವೊಮ್ಮೆ ತಡವಾಗಿ, ಮತ್ತೊಮ್ಮೆ ಬೇಗ. ಬೇಗ ಹೋದಾಗ ಬಸ್ಸು ಸಿಗಲಿಲ್ಲ- ಸಮಯಕ್ಕೆ ಮೊದಲು ಹೇಗೆ ಹೋದ ಎಂದು ನಿಂತು ಬೈಯುವವ, ನಾಳೆ ಅದರಲ್ಲಿ ಕೂತಿದ್ದರೆ ಬೇಗವಾದರೂ-ತಡವಾದರೂ ಕೇಳುವ ಗೋಜಿಗೆ ಹೋಗುವುದಿಲ್ಲ. ತಾನು ಕೂತಿದ್ದೇನಲ್ಲ.! ಹೋದರೆ ಅಯಿತು.
ಅಂದು ಅವರು ಹೇಳಿದ ಮಾತು ಸ್ವಲ್ಪ ತೀಕ್ಷ್ಣವಾಗಿತ್ತು. ಸರಿ-ತಪ್ಪು ಅಂತ ಗೊತ್ತಿದ್ದು ತನ್ನ ಮುಂದೆಯೇ ಏನಾದರೂ ನಡೆದಾಗ ಅದನ್ನು ಪ್ರಶ್ನಿಸುವ ಕೆಚ್ಚು ಇರಬೇಕು. ಅವರು ಈ ಮಾತು ಹೇಳುವಾಗ ಎಪ್ಪತ್ತರ ಯುವಕ, ಕೇಳುತ್ತಿದ್ದ ನಾನು ನಿಜಕ್ಕಾದರೂ ಮುದುಕ. ಹಾಗಂತ ಅವರ ಮಾತಿನ ಪ್ರಭಾವ ಆಗಲಿಲ್ಲ ಎಂದಲ್ಲ.
********************************************
ಇನ್ನೊಂದು ಘಟನೆ-ಅವರೇ ಹೇಳಿದ್ದು: ಅಲ್ಲೇ ಊರಿನ ನಮ್ಮ ಜಾಗದಲ್ಲೇ ಇದ್ದ ಯಾವುದೋ ಮರದಿಂದ ಮನೆಯ ಮಾಡಿಗಾಗಿ ಪಕ್ಕಾಸು ತಯಾರಿಸಲು ಕೆಲಸದವರನ್ನು ಕರೆಸಿದ್ದರು. ಕೆಲಸ ಸಾಗುತ್ತಿತ್ತು. ಯಾರೋ ಆಗದವರು ದೂರು ನೀಡಿದ್ದರು!. ಸ್ಥಳಕ್ಕೆ ಬಂದ ಅಧಿಕಾರಿಗಳು ಕೆಲಸದವರಿಗೆ ಕೆಲಸ ನಿಲ್ಲಿಸಿ ಎಂದು ತಾಕೀತು ಮಾಡಿದರಂತೆ. ಅವರನ್ನು ಕಂಡ ದೊಡ್ಡಪ್ಪ ಹೇಳಿದ್ದು- ಕೆಲಸದವರನ್ನು ಕರೆದದ್ದು ನಾನು, ಅವರಿಗೆ ಆಜ್ಞೆ ನೀಡುವ ಅಧಿಕಾರ ನಿಮಗಿಲ್ಲ, ನನ್ನನ್ನು ಮಾತಾನಾಡಿಸಿ, ಎಂದು ಹೇಳಿ ಕೆಲಸದವರಿಗೆ ಕೆಲಸ ಮುಂದುವರೆಸಲು ಹೇಳಿದರು!. ಮತ್ತೇನಾಯಿತೋ ನೆನಪಿಲ್ಲ. ಆದರೆ ಕಾನೂನು-ಚರ್ಚೆಯ ಬಗ್ಗೆ ಖಚಿತ ತೀರ್ಮಾನವಿತ್ತು-ಆಸಕ್ತಿಯೂ ಇತ್ತು ಅವರಿಗೆ.
ಅವರು ಪೋಸ್ಟ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಗಿನ ಒಂದು ಘಟನೆಯನ್ನು ಹೇಳಿದ್ದರು, ಅದರ ಯಥಾವತ್ತಾದ ಘಟನೆ ಸರಿಯಾಗಿ ನೆನಪಿಲ್ಲವಾದರೂ ಅದರ ಸಾರ ನೆನಪಿದೆ. ಇದರ ವಿವರ ನೀಡಿದವರು ಅಣ್ಣ. ಅನ್ಯ ರಾಜ್ಯದ
ಆಫೀಸರ್ ಒಬ್ಬರು ತಮ್ಮ ವ್ಯಾಪ್ತಿಯ ಅಂಚೆ ಕಛೇರಿಗಳ ಪೋಸ್ಟ್ ಮಾಸ್ಟರರ ಸಭೆಯನ್ನು ಕಾರ್ಕಳದಲ್ಲಿ ಕರೆದರಂತೆ.ಅದರಲ್ಲಿ ದೊಡ್ಡಪ್ಪ ಕೂಡ ಭಾಗವಹಿಸಿದ್ದರು. ಆಗ ಅವರಿಗೆ ಆ ವೃತ್ತಿಯಲ್ಲಿ ನಲ್ವತ್ತು ವರ್ಷಕ್ಕೂ ಹೆಚ್ಚಿನ ಅನುಭವ. ಆಗ ಎಲ್ಲ ಕಡತಗಳನ್ನೂ ಕೈಯಲ್ಲಿ ಬರೆದು ಕಟ್ಟಿಡುವ ಕ್ರಮ. ಯಾವುದನ್ನೋ ಕೇಳಿದರೆ ಕಟ್ಟು ಹುಡುಕುವುದೇ ಕಷ್ಟ. ಹೊಸಬರಾದ ಅವರು ಪ್ರಾಯಃ ಒಂದೆರಡು ಕಛೇರಿಗಳನ್ನು ಕಂಡು ಅವ್ಯವಸ್ಥೆ ಎಂದು ಅವರಿಗೆ ಅನಿಸಿರಬಹುದು. ಅದರ ಮೇಲೆಯೇ ಎಲ್ಲರೂ ಹೀಗೆಯೇ ಎಂಬ ನಿರ್ಣಯ-ಇದು ನಾವೂ ಮಾಡುವ ಸಾಮಾನ್ಯ ತಪ್ಪು. ಇವರೂ ಹಾಗೆಯೇ ಮಾಡಿದರೆನಿಸುತ್ತದೆ. ನಾನಾದರೆ ಇವರೆಲ್ಲ ಆಪೀಸರ್ ಗಳು ಹೀಗೆಯೇ ಎಂದು ಕೇಳಿ ಸುಮ್ಮನಿರುತ್ತಿದ್ದೆ. ಆದರೆ ದೊಡ್ಡಪ್ಪ ಸುಮ್ಮನಿರಲಿಲ್ಲ. ತನ್ನ ಕಛೇರಿಗೆ ದಾಖಲೆ ಪರಿಶೀಲನೆಗೆ ತಾವು ಯಾವಾಗಲಾದರೂ-ಯಾವ ಹೊತ್ತಿಗಾದರೂ ಬರಬಹುದು ಎಂದು ಹೇಳಿದರು!. ಅಂತೆಯೇ ಒಮ್ಮೆ ಮಧ್ಯಾಹ್ನ ಹೇಳದೇ ಕೇಳದೇ ಅವರು ಬಂದೇ ಬಿಟ್ಟರು. ದಾಖಲೆ-ಸ್ವಚ್ಛತೆಗಳನ್ನು ಕಂಡು ಬೆರಗಾದರು. ಉತ್ತಮ ಅಂಚೆ ಕಛೇರಿ ಎಂಬ ಪ್ರಶಸ್ತಿಗೆ ಶಿಫಾರಸು ಮಾಡಿದರು. ಅಂದಿನ ಪ್ರಶಸ್ತಿ ಸ್ವೀಕರಿಸುವಾಗಿನ ಫೋಟೋ ಮನೆಯಲ್ಲಿಯೇ ಟಿ.ವಿ.ಯ ಮೇಲೆ ಇದೆ. ಕುತೂಹಲದಿಂದ ಕೇಳಿದಾಗ ಅವರು ಹೇಳಿದ ಘಟನೆಯಿದು. ಇಂಥಹ ಘಟನೆಗಳಿಂದ ಸಾಮಾನ್ಯರು ಪ್ರೇರಿತರಾಗುವುದು ಸಹಜ. ನನಗೂ ಹಾಗೆಯೇ, ಅಲ್ಲ ಇಂಥದ್ದೇ ಒಂದು ಏನೋ ಆಯಿತು. ಕಾಲೇಜಿನಲ್ಲಿ ತರಗತಿಯ ಒಬ್ಬ ಮಾಡಿದ ತಪ್ಪಿಗೆ ಅಧ್ಯಾಪಕ ವೃಂದ ಇಡೀ ತರಗತಿಯನ್ನು ದೂರುತ್ತಿದ್ದರು. ಎಲ್ಲರೂ ಹೀಗೆಯೇ ಎಂದು ಬೈದರು.ಇಲ್ಲ ಎಂದು ಹೇಳುವ ಯಾರಾದರೂ ಇದ್ದೀರಾ ಎಂದು ಕೇಳಿದರು. ನನಗೂ ದೊಡ್ಡಪ್ಪ ಹೇಳಿದ ಕೆಚ್ಚು ಎಂಬ ಪದ ನೆನಪಾಯಿತು. ಯುವ ಬಿಸಿ ರಕ್ತ ಕೈ ಎತ್ತಲು ಪ್ರೇರೇಪಿಸಿತು.!
ಚಲನ ಚಿತ್ರದಲ್ಲಾಗಿದ್ದರೆ ಮುಂದೆ ಏನಾಯಿತು ಎಂಬುದನ್ನು ಊಹಿಸಬಹುದು. ನಿಜ ಜೀವನವು ಅನುಭವ ಇಲ್ಲದ ಮೊಂಡು ಧೈರ್ಯದಿಂದ ಸಾಧಿಸಲಾಗುವಂಥದ್ದಲ್ಲ. ದೊಡ್ಡಪ್ಪನವರಿಗೆ ಧೈರ್ಯ-ಅನುಭವ ಎರಡೂ ಇತ್ತು, ನನಗೆ ಎರಡೂ ಕಡೆ ಕೊರತೆ ಇತ್ತು. ಕೈ ಎತ್ತಿದರೆ ಮುಂದೇನಾಗುತಿತ್ತು ಅಂತ ಊಹಿಸಿದೆ, ನಗೆಪಾಟಲಾಗುವುದು ಉಳಿಯಿತು.! ಕೆಚ್ಚು ಇಳಿದುಹೋಯಿತು.!!
**************************************************************
ದೊಡ್ಡಪ್ಪನವರ ಧೈರ್ಯದ ವಿಚಾರದಲ್ಲಿ, ಅಕ್ಕ ಹೇಳುತ್ತಿದ್ದ ಒಂದು ಘಟನೆ ಚೆನ್ನಾಗಿದೆ.
ನನ್ನ ತಂದೆಯವರು ಮತ್ತು ದೊಡ್ಡಪ್ಫ ಯಾವುದೋ ಕಾರ್ಯಕ್ಕೆ ಉಜಿರೆಗೆ ಬಂದಿದ್ದರು. ಅವರವರ ಕೆಲಸವಾದ ಬಳಿಕ ಪ್ರತ್ಯೇಕವಾಗಿ ಮನೆಗೆ ಹೊರಟರು. ಆಗ
ಕತ್ತಲಾದ ಬಳಿಕ ಮರಳಿ ಹೋಗುವುದಕ್ಕೆ ವಾಹನ ಸಿಗುವುದು ಕಷ್ಟ. ಯಾವುದೋ ಲಾರಿಯನ್ನು ಆಶ್ರಯಿಸಬೇಕು. ಮೊದಲು ದೊಡ್ಡಪ್ಪ ಕಾಲ್ನಡಿಗೆಯಲ್ಲಿ ಹೊರಟೇ ಬಿಟ್ಟರು. ಸುಮಾರು ಹೊತ್ತಿನ ಬಳಿಕ ನನ್ನ ತಂದೆಯವರೂ ಉಜಿರೆಯಲ್ಲಿ ದೊರೆತ ಲಾರಿಯನ್ನು ಹತ್ತಿದರು. ಸುಮಾರು ದಾರಿ ಕ್ರಮಿಸಿರಬಹುದು, ನಡೆದುಕೊಂಡು ಹೋಗುತ್ತಿದ್ದ ದೊಡ್ಡಪ್ಪ, ಲಾರಿಯ ಬೆಳಕು ನೋಡಿ ಕೈ ತೋರಿಸಿದರು. ಆದರೆ ಲಾರಿಯವನು ಆಗಲೇ ಜನ ಭರ್ತಿಯಾಗಿದ್ದರೆಂದೋ ಏನೋ ನಿಲ್ಲಿಸಲಿಲ್ಲ. ಆದರೆ ಲಾರಿಯ ಬೆಳಕಿನಲ್ಲಿ ದೊಡ್ಡಪ್ಪನನ್ನು ಲಾರಿಯಲ್ಲಿ ಕೂತಿದ್ದ ನನ್ನ ತಂದೆ ಕಂಡರು. ಒಬ್ಬರೇ ನಡೆದುಕೊಂಡು ಹೋಗುತ್ತಿದ್ದಾರಲ್ಲ ಎಂದು ಭಾವಿಸಿದ ತಂದೆಯವರು ಸ್ವಲ್ಪ ಮುಂದೆ ಹೋದಂತೆ ಡ್ರೈವರಿಗೆ ತಿಳಿಸಿ ಲಾರಿಯಿಂದ ಇಳಿದರು.-ದೊಡ್ಡಪ್ಪನಿಗಾಗಿ ಕಾದರು. ಅಷ್ಟರಲ್ಲೇ ಹಿಂದಿನಿಂದ ಇನ್ನೊಂದು ವಾಹನ ಬಂತು, ದೊಡ್ಡಪ್ಪ ಕೈ ತೋರಿಸಿದರು. ವಾಹನ ನಿಂತಿತು. ತನ್ನ ತಮ್ಮ ಬೇರೆ ಲಾರಿಯಲ್ಲಿದ್ದ- ಇಳಿದ ವಿಚಾರ ಗೊತ್ತಿಲ್ಲದೇ ಅವರು ನಿಂತ ವಾಹನ ಏರಿ ಹೋದರು. ಇತ್ತ ಆ ಕಾಡು ರಸ್ತೆಯಲ್ಲಿ ನನ್ನ ತಂದೆ ಒಬ್ಬರೇ ಉಳಿದರು. ಮೂಲತಃ ಧೈರ್ಯ ಇದ್ದ ಕಾರಣವೇ ತಂದೆಯವರು ವಾಹನಕ್ಕಾಗಿ ಕಾದರು. ತಡವಾದರೂ ಲಾರಿಯನ್ನಾಶ್ರಯಿಸಿದರು. ಧೈರ್ಯ ಇದ್ದ ದೊಡ್ಡಪ್ಪ ಕಾಡು ದಾರಿಯನ್ನು ಕಾಲ್ನಡಿಗೆಯಿಂದ ಪ್ರಾರಂಭಿಸಿದರು. ಆದರೆ ಕೊನೆಗೆ ದೊಡ್ಡಪ್ಪನವರಿಗೆ ವಾಹನ ಸಿಕ್ಕಿತು. ತಂದೆಯವರು ನಡೆಯಬೇಕಾಯಿತು. ಭಯದಿಂದ ಮನೆಯ ಕಡೆ ನಡೆದರು.
ಮತ್ತೆ ಯಾವುದೇ ವಾಹನ ಸಿಗದ ಕಾರಣ ತಂದೆಯವರು ನಡೆಯುತ್ತಲೇ ಮನೆ ತಲುಪಿದರು. ಮನೆ ಮುಟ್ಟುವಾಗ ಹೆದರಿಕೆಯಿಂದ ನಡುಗುತ್ತಿದ್ದರಂತೆ. ಈ ಕಥೆ ಕೇಳುವಾಗ ನಗು ಬರುತ್ತದೆಯಾದರೂ ಅಣ್ಣನ ಕುರಿತ-ತಮ್ಮನ ಗೌರವದ, ಅವರ ನಡುವಿನ ಬಾಂಧವ್ಯ ಎದ್ದು ಕಾಣುತ್ತದೆ.
ಈಗಲೂ ಪ್ರತೀಸಲ ಆ ದಾರಿಯಾಗಿ ಊರಿಗೆ ಹೋಗುವಾಗ ನನಗೆ ಈ ಘಟನೆ ನೆನಪಾಗುವುದುಂಟು.
************************************************************
ದೊಡ್ಡಪ್ಪನವರು ಕೇಳುವ ಪ್ರಶ್ನೆಗಳೂ ಕೆಳವೊಮ್ಮೆ ತಲೆಕೆರೆಯುವಂತೆ ಮಾಡುತ್ತಿತ್ತು. ಅವರ ತರ್ಕದಲ್ಲಿ ಹಾಸ್ಯವೂ, ಸೂಕ್ಷ್ಮ ಅಂಶಗಳೂ ಇರುತ್ತಿದ್ದವು. ಹಿಂದೆ ಹೇಳಿದಂತೆ ಅವರಿಗೆ ಪಿತೃ ಕಾರ್ಯದಲ್ಲಿ ಅತೀವ ಶ್ರದ್ಧೆ. ಕಳೆದ ವರ್ಷದವರೆಗೂ ಮಹಾಲಯವನ್ನೂ ನಡೆಸಿಕೊಂಡು ಬಂದವರು. ದೇಹ ಒಪ್ಪದೇ ಇದ್ದರೂ ಮನಸು ಬಿಡದೇ ಇದ್ದವರು.
# ರಾಮ ಕಾಡಿದ ಹೋದ ಬಳಿಕ ದಶರಥ ಸತ್ತ, ರಾಮನಿಗೆ ವಿಷಯ ತಿಳಿಯಿತು. ಅವನು ಕಾಡಿನಲ್ಲಿ ದಶರಥನಿಗೆ ಶ್ರಾದ್ಧ ಮಾಡಿದ. ಇದರಲ್ಲೇನು ವಿಶೇಷವಿಲ್ಲ. ಕಾಡಿನಲ್ಲಿ ಅನ್ನದ ಪಿಂಡ ತಯಾರಿಸಲಿಕ್ಕೆ ಅವನಿಗೆ ಅಕ್ಕಿ ಎಲ್ಲಿ ಸಿಕ್ಕಿತು?
ಕೇಳುವಾಗ ಹಾಸ್ಯವೆಂದೆನಿಸಿದರೂ, ಪಿಂಡಕ್ಕೆ ಅನ್ನ ಎಲ್ಲಿಂದ, ಬೇರೆ ಯಾವುದಾದರೂ ವಸ್ತುವಿನಿಂದ ಮಾಡಿದನೇ? ಅಂಥಹ ಅವಕಾಶವಿದೆಯೇ ಎಂಬ ಕುತೂಹಲವೂ ಇದೆ. ನಾವಾಗಿದ್ದರೆ ಇದೇ ಮಾತುಗಳನ್ನು ವ್ಯಂಗ್ಯವಾಗಿ ಆಡುತ್ತಿದ್ದೆವು.ಪ್ರಾಯಃ ಪುರೋಹಿತರಿಗೂ ಕೇಳಿದರೆ ಒಂದರೆ ಕ್ಷಣ ತಡಕಾಡಬಹುದೇನೋ, ಅಥವ ಹಾರಿಕೆಯ ಉತ್ತರ ನೀಡಬಹುದೇನೋ?
ಅಂತೂ ಹೇಗೋ ರಾಮಾಯಣದಲ್ಲಿ ಹುಡುಕಿ ಉತ್ತರ ಸಿಕ್ಕಿತು. ಅವರಿಗೆ ಅದರಿಂದ ತೃಪ್ತಿಯೂ ಆಯಿತು. ಅವರಿಂದಾಗಿ ನನಗೂ ತಿಳಿಯಿತು ಎಂಬುದುನ್ನು ಹೇಳಬೇಕು.
# ಭಿಕ್ಷುಕರಿಗೆ ಭಿಕ್ಷೆ ನೀಡಬೇಕೋ ಬೇಡವೋ ಎಂಬುದರ ಬಗ್ಗೆಯೂ-ನೀಡಬೇಕು ಎಂಬ ಅವರ ಅಭಿಪ್ರಾಯವಿತ್ತು. ಅದಕ್ಕೆ ಸಮರ್ಥನೆಯೂ ಇತ್ತು.
# ತಲೆ ಮೇಲೋ, ಕಾಲು ಮೇಲೋ ಎಂಬುದೊಂದು ಅವರ ಮಾನಸಿಕ ಚರ್ಚೆ. ಮೇಲಿರುವುದು ತಲೆಯೇ ಅಲ್ವಾ ಅಂತ ಅನಿಸಬಹುದು. ಹಾಗಾದರೆ ದೊಡ್ಡವರ ಕಾಲಿಗೆ ಏಕೆ ಏರಗುವದು, ತಲೆಗೆ ಎರಗಬಾರದೇ?
# ಅನ್ನದಾನ ಶ್ರೇಷ್ಠ ದಾನ. ಮತ್ತೆ ವಿದ್ಯೆ. ಹಸಿದು ಬಂದವನಿಗೆ ವಿದ್ಯೆ ಹೇಳುತ್ತಾ ಕೂತರೆ ಅವನ ಹೊಟ್ಟೆ ತುಂಬುವುದಿಲ್ಲ.
# ವಾಮನ ಭೂಮಿ ಮೇಲೆ ಕಾಲಿಟ್ಟದ್ದು ಹೇಗೆ? ಆಗ ಜನರೆಲ್ಲ ಎಲ್ಲಿದ್ದರು? ಇದಕ್ಕೆ ಏನರ್ಥ?
# ಕಾಳಿದಾಸನದೆಂದು ಹೇಳುವ ಕಮಲೇ ಕಮಲೋತ್ಪತ್ತಿಃ ಎಂಬ ಸಮಸ್ಯೆ..!
# ಹಿರಣ್ಯಾಕ್ಷ ಭೂಮಿಯನ್ನು ಅಪಹರಿಸಿ ಸಮುದ್ರದಲ್ಲಿಟ್ಟದ್ದು ಹೇಗೆ? ಸಮುದ್ರ ಭೂಮಿಯಲ್ಲಿಯೇ ಇರುವುದಲ್ವಾ?
# ರಾಮಾಯಣದ ಮಂಗಗಳು ಆದಿ ಮಾನವರ? ಆಗ ಮಂಗ ಮಾತನಾಡುತ್ತಿತ್ತಾ?
# ಯದ್ಭಾವಂ ತದ್ಭವತಿ-ಇದೆಲ್ಲ ಅವರ ಅನುಭವದ ಮೂಸೆಯಿಂದ ಕಡೆದು ತೊಡಗಿದ ಮಾತುಗಳು. ಇದಕ್ಕೆ ನನ್ನ ತಕರಾರು ಈಗಲೂ ಇದೆ, ಅದು ಬೇರೆ ವಿಷಯ.
***************************************************
ಹಿಂದೊಮ್ಮೆ ಮಾತನಾಡುವಾಗ ಅವರು ಆಯುಷ್ಯದ ಬಗ್ಗೆಯೂ ಹೇಳಿದ್ದುಂಟು. ಯಾರಾದರೂ ಕಾಲಿಗೆರಗಿದರೆ 'ಆಯುಷ್ಯಮಾನ್ ಭವ' ಎಂದು ಆಶೀರ್ವದಿಸುವುದು ಪದ್ಧತಿ. ಆದರೆ ದೀರ್ಘ ಆಯುಷ್ಯ ಬೇಕಾ. ಕಾಗೆ-ಆಮೆಗಳಂತೆ ಎಂದಿದ್ದರು. ಅವರ ಕಾಲಿಗೆ ಯಾರಾದರೂ ಎರಗಿದಾಗ ಅವರು ಹೆಚ್ಚಾಗಿ ಹೇಳುತ್ತಿದ್ದ ಮಾತು- "ಇಷ್ಟಾರ್ಥ ಸಿದ್ಧಿರಸ್ತು.!"
ಅವರು ಯಾವುದೇ ಪ್ರಶ್ನೆ ಕೇಳಿದ ಮೇಲೆ ಒಂದು ಕ್ಷಣ ಸುಮ್ಮನಿರುವರು. ನಾವು ಉತ್ತರಿಸಬೇಕು ಎಂದೋ ಅಥವ ಆಲೋಚಿಸು ಎಂದೋ. ಕ್ಷಣ ಕಳೆದು ಮಾತು ಮುಂದುವರೆಸುವವರು. ಒಟ್ಟಿನಲ್ಲಿ ಅವರೊಡಗಿನ ಮಾತುಕತೆ ಒಂದು ಆಪ್ತಸಂವಾದ. ಬೆಳಗ್ಗೆ ಬೇಗ ಎದ್ದು ಅಂಗಡಿ ತೆರೆಯುವವರು. ನಾವು ಹೆಚ್ಚು ಮಾತನಾಡಿದ್ದು ಅಲ್ಲಿಯೇ, ಅದು ಬಿಟ್ಟರೆ ಮಧ್ಯಾಹ್ನ. ಅವರದೊಂದು ಸುಖಾಸನ(easy chair) ಮುಂದೆ ನಾನು. ಅಕ್ಕನ ಮನೆಗೆ ಬಂದಾಗ ಊಟದ ಟೇಬಲ್ ಬಳಿ. ಎಲ್ಲೇ ಆದರೂ ಮಾತು ಮುಗಿದದ್ದು ಅಂತಿಲ್ಲ.
ಅವರ ಭಾವ-ಭಂಗಿ, ಮಾತಿನ ಧಾಟಿ, ಚಿಂತನೆ ಎಲ್ಲದರ ಪ್ರಭಾವ ನನ್ನ ಮೇಲೆ ಆಗಿದೆ. ನನಗೆ ಅವರೊಬ್ಬರು ಶಿಲ್ಪಿ-ಗುರು.
*****************************************************
ಹಿಂದೆಯೇ ಹೇಳಿದಂತೆ ಏಕಾದಶಿಯಂದು ಶ್ರಾದ್ಧ ಮಾಡಬಾರದು ಎಂಬ ವಿಚಾರವು ಅವರಿಗೆ ಒಪ್ಪಿಗೆಯಾಗಿರಲಿಲ್ಲ. ಏಕಾದಶೀ ತಿಥಿಯು ಅದನ್ನು ಹಿಡಿಯುವವರಿಗೆ, ನನಗಿಲ್ಲ ಎನ್ನುತ್ತಿದ್ದರು. ಹಿಡಿದರೂ ಬಿಟ್ಟರೂ ಅಂದು ಏಕಾದಶೀ ಹೌದಲ್ಲ ಅಂತ ನಾನು. ಪ್ರಾಯಃ ನಾವು ಹೆಚ್ಚು ಚರ್ಚಿಸಿದ ವಿಚಾರ ಇದುವೇ. ಅವರದ್ದು ಅದೇ ಪ್ರಶ್ನೆ, ಅವರನ್ನು ಒಪ್ಪಿಸಲು ನನ್ನ ಬೇರೆ ಬೇರೆ ಉತ್ತರಗಳು.
ಕಳೆದ ವರ್ಷ ಮತ್ತಿದೇ ಚರ್ಚೆ ಬಂದಾಗ ಹೊಸ ಉತ್ತರದೊಂದಿಗೆ ಸಿದ್ಧನಾಗಿದ್ದೆ. ಅಂದು ಮಾತ್ರ ಉತ್ತರ ಕೇಳಿದ ಅವರು ಅದರ ಬಗ್ಗೆ ಚರ್ಚಿಸಲಿಲ್ಲ. ಹಾಗಂತ ಅವರು ಒಪ್ಪಿದರು ಅಂತ ಹೇಳಲೂ ಇಲ್ಲ.ಅವರಿಗೆ ಕಾಲಾವಕಾಶ ಬೇಕು, ತನ್ನ ತರ್ಕಕ್ಕೆ ಅದು ಒಗ್ಗಬೇಕು. ಸಮಾಜಕ್ಕೆ ಆಚರಣೆಗೆ ಸಾಧ್ಯವಾಗಬೇಕು ಎಂಬುದು ಅವರ ನಿಲುವು. ಒಮ್ಮೆ ನಮ್ಮ ಮನೆಗೆ ಸತ್ಯನಾರಾಯಣ ಪೂಜೆಗೆ ಬಂದಿದ್ದ ಪುರೋಹಿತರಲ್ಲಿಯೂ ಕೇಳಿದ್ದರು. ಏಕಾದಶೀಯಂದು ಸತ್ಯನಾರಾಯಣ ಪೂಜೆ ಮಾಡಬಹುದಾ..?
**********************************************
ಪಾಂಚಭೌತಿಕವಾದ ಯಾವುದೇ ವಸ್ತು ಶಾಶ್ವತವಲ್ಲ. ಅದಕ್ಕೆ ಅದರದ್ದೇ ಆದ ಆಯುಷ್ಯವಿದೆ. ಈ ದೇಹವೂ ಹಾಗೆಯೇ. ದಿನವೂ ಬದಲಾಗುವದರಿಂದಲೇ ಇದಕ್ಕೆ ಶರೀರ ಎಂದು ಹೆಸರಂತೆ. ನಿತ್ಯ ಬದಲಾವಣೆ ನಮ್ಮ ಗಮನಕ್ಕಡ ಬರದಿದ್ದರೂ ಕಾಲದ ಗಡಿಯಾರಕ್ಕೆ ತಿಳಿದಿರುತ್ತದೆ. ಕಾಲದ ಚಕ್ರದಲ್ಲಿ ಎಲ್ಲರೂ ಉರುಳಲೇ ಬೇಕು ಎಂಬುದು ಅವರದೇ ಮಾತು.
ತಾನು ಶತಾಯುಷಿ ಆಗಲಾರೆ ಎಂದು ಅವರಿಗೆ ತಿಳಿದಿತ್ತು ಅಂತ ಕಾಣುತ್ತದೆ.
ಅವರಿಗೆ ಅನಾರೋಗ್ಯವೆಂದು ತಿಳಿದಾಗ ಸ್ವಲ್ಪ ಭಯವಾಗಿತ್ತು. ಅವರನ್ನು ಮಂಗಳೂರಿಗೆ ಕರೆದುಕೊಂಡು ಬಂದಾಗ ಆಸ್ಪತ್ರೆಗೆ ಹೋಗಿದ್ದೆ. ಮುಖ ಕಂಡು ಪರಿಚಯವಾಗಿ ಮಾತನಾಡಿದ್ದರು. ಆರೋಗ್ಯವೂ ಚೇತರಿಸುತ್ತಿತ್ತು. ಭಾನುವಾರದಂದು ಬೆಳಿಗ್ಗೆ ಉಪಾಹಾರ ಕೊಂಡು ಹೋದಾಗ ಮಾತನಾಡಿಸಿದ್ದರು. ಕೆಲಸಕ್ಕೆ ಹೋಗಲಿದೆಯಾ-ಹೋಗು ಎಂದೂ ಹೇಳಿದ್ದರು. ಕೊನೆಯ ಕಾಲಕ್ಕೆ ಅವರನ್ನು ಕಾಣುವ, ಗಂಜಿ ಕೊಂಡು ಹೋಗುವ ಯೋಗ-ಭಾಗ್ಯ ನನಗೆ ಸಿಕ್ಕಿತ್ತು.
ಆದರೆ ಮರುದಿನ ಮಾತ್ರ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ದುಡಿದು-ದಣಿದ ಸಣಕಲು ದೇಹ, ಅದರಲ್ಲೂ ಅವರಿಗೆ ಒಳಗಿನಿಂದ ಏನು ನೋವು ಆಗುತ್ತಿತ್ತೋ, ಬಾಯ್ದೆರೆದು ಹೇಳಲಾಗುತ್ತಿರಲಿಲ್ಲ. ಹಾಗಂತ ದೇಹ ಸುಮ್ಮನಿರಲಿಲ್ಲ, ಸ್ವಲ್ಪ ಒದ್ದಾಡುತ್ತಿತ್ತು. ಅವರು ಎಂದೂ ಕೂಡ ಅಯ್ಯೋ ಎಂದು ಉದ್ಗರಿಸಿದ್ದನ್ನು ನಾನು ಕೇಳಿಯೇ ಇಲ್ಲ. ಆದರೆ ಕೊನೆಯ ಕ್ಷಣದ ಅವರ ಕ್ಷೀಣ ಸ್ವರದ ಉದ್ಗಾರ ಮಾತ್ರ ಈಗಲೂ ಮರೆಯಲಾಗುತ್ತಿಲ್ಲ.
ಅವರಿಗೆ ತಾನು ಚಾರ್ಮಾಡಿಯ ಮನೆಯಲ್ಲಿ ಕೊನೆಯಾಗಬೇಕು ಎಂಬ ಬಯಕೆ ಇತ್ತು, ಹೇಳಿದರೂ ಕೂಡ.ಆದರೆ ಅವರ ಕೊನೆಯ ಆಸೆಯನ್ನು ಈಡೇರಿಸಲು ಎಲ್ಲರು ಎಷ್ಟು ಪ್ರಯತ್ನಪಟ್ಟರೂ ಕೋವಿಡ್ ರೋಗದ ನಿಯಮಗಳ ಜಾಳಿನಲ್ಲಿ ಅದು ಸಾಧ್ಯವಾಗಲಿಲ್ಲ.
ಅವರ ಆರೋಗ್ಯ ಹದೆಗೆಟ್ಟ ದಿನವದು ಏಕಾದಶೀ. ಇನ್ನೇನಿದ್ದರೂ ದಿನಗಣನೆ ಎಂದು ಎಲ್ಲರಿಗೂ ತಿಳಿಯಿತು. ಮರುದಿನ ದ್ವಾದಶೀಯಂದು ಅವರ ಪ್ರಾಣಪಕ್ಷಿ ಹಾರಿತು. ಪ್ರಾಯಃ ಏಕಾದಶೀಯಂದು ಹೋದರೆ ಅಂದು ಶ್ರಾದ್ಧ ಮಾಡಲಾಗದು, ನನಗೆ ಸಮಾಧಾನವಾಗದು ಎಂದು ದೇವನೇ ಒಂದು ದಿನ ಕಳೆದು ಕರೆದುಕೊಂಡನೋ ಏನೋ ಎಂದು ಅನಿಸುತ್ತದೆ.
ಹಾಗಂತ ಅವರು ಇಲ್ಲವೆಂದಿಲ್ಲ. ಚಾರ್ಮಾಡಿಯ ಆ ತೋಟಗಳಲ್ಲಿ, ದನ ಕಟ್ಟುವ ಕೊಟ್ಟಿಗೆಯಲ್ಲಿ, ತಿಟ್ಟೆಯಲ್ಲಿ, ನೀರು ಬಿಸಿ ಮಾಡುವ ಬಚ್ಚಲು ಕೋಣೆಯ ಹಂಡೆಗೆ ಬೆಂಕಿ ಹಾಕುವ ಜಾಗದಲ್ಲಿ, ಊಟ ಮಾಡುವ ಅಡುಗೆ ಕೋಣೆಯಲ್ಲಿ, ಅಂಗಡಿಯಲ್ಲಿ, ಪೋಸ್ಟ್ ಆಫೀಸಿನಲ್ಲಿ, ಸುಖಾಸೀನದಲ್ಲಿ ಕುಳಿತ ಭಂಗಿಯಲ್ಲಿ, ಪೂಜೆಗೆ ಕೂಡುವ ಜಾಗದಲ್ಲಿ, ಮಲಗಿದಾಗ ಕನಸಿನಲ್ಲಿ, ಕೈ ಮುಗಿಯುವ ಭಂಗಿಯಲ್ಲಿ ದೇವರ ಕೋಣೆಯಲ್ಲಿ, ಇನ್ನೇನು ಎಲ್ಲರ ಮನಸಿನಲ್ಲಿ ಅಚ್ಚು ಹಾಕಿದಂತೆ ಕುಳಿತಿದ್ದಾರೆ. ಅವರ ಚಿತ್ರ ಕಣ್ಣ ಮುಂದೆ ಇದೆ, ಅವರ ಆಪ್ತರ ಕಮಲದಂಥಹ ಕಣ್ಣುಗಳ ಒಳಗೆ ವಾಮನನಾಗಿ ಇದ್ದಾರೆ.
******************************************************
ಯಾರೂ ಶಾಶ್ವತರಲ್ಲ. ಇಲ್ಲಿ ಬಂದವರು, ಕರೆದಾಗ ಹೊರಡಬೇಕು. ಎಲ್ಲರೂ ಮಾರ್ಗದಲ್ಲಿ ಸಿಗುವವರು.ಕಳೆದು ಹೋಗುವವರು.ಕೆಲವರು ಮಾತ್ರ ಮಾರ್ಗದರ್ಶಕರು.
ಇಂಥಹ ಮಾರ್ಗದರ್ಶಕರ ಅನುಗ್ರಹವು ಕುಟುಂಬದವರ ಮೇಲಿರಲಿ ಎಂದು ಆಶಿಸುವೆ.
ಇತಿಶ್ರೀ
ಬರಹದಲ್ಲಿ ಕೇವಲ ಪ್ರಶ್ನೆಗಳು ಮಾತ್ರ ಇವೆ, ಯಾವುದಕ್ಕೂ ಉತ್ತರವೇ ಇಲ್ಲವಲ್ಲ ಎಂದು ಕೆಲವರು ಗಮನಿಸಬಹುದು. ಉತ್ತರಗಳೆಂದರೆ ಕೇವಲ ಅಭಿಪ್ರಾಯಗಳು. ಎಲ್ಲರಿಗೂ ಅವರವರ ಅಭಿಪ್ರಾಯಗಳಿದ್ದು, ಅವರವರೇ ಉತ್ತರ ಹುಡುಕಲಿ ಎಂಬ ಉದ್ದೇಶವಷ್ಟೇ. ಆದರೂ ಅಂದು ದೊಡ್ಡಪ್ಪ ಏನು ಹೇಳಿದರು ಎಂಬ ಕುತೂಹಲವುಳ್ಳವರಿಗೆ ಒಂದು ಪ್ರಶ್ನೆ- ಉತ್ತರ.
ತಲೆ ಮೇಲೋ-ಕಾಲು ಮೇಲೋ?
ದೊಡ್ಡವರ ಕಾಲು ಹಿರಿದು, ಚಿಕ್ಕವರ ತಲೆ ದೊಡ್ಡದು. ಇನ್ನೂ ಹೇಳುವುದಾದರೆ ದೇವರ ಕಾಲು ಮೇಲು, ಮನುಷ್ಯನ ತಲೆ ಮೇಲು. ಮತ್ತೂ ಮುಂದುವರೆದರೆ ಮನುಷ್ಯನ ತಲೆ ದೇವರ ಕಾಲಿಗೆ ಬಿದ್ದರೆ ಅದು ಮಿಗಿಲು.