Popular Posts

Sunday, August 8, 2021

ನಾ ಕಂಡ-ಕಮಲದ ಕಣ್ಣುಗಳು.




ಮನುಷ್ಯ ಸಂಘ ಜೀವಿ. ಮನಸಿನ ಉದಾತ್ತ ಭಾವನೆಗಳಿಂದಲೇ ಜೀವಿ ಮನುಷ್ಯನಾಗುತ್ತಾನೆ. ಸಂಘದೊಳಗೆ ಭಾವನೆಗಳ ವಿನಿಮಯದಿಂದ  ಸಂಬಂಧ ಏರ್ಪಡುತ್ತದೆ. ಆಸಕ್ತ ವಿಷಯಗಳು ಸಮಾನ ಮನಸ್ಕರನ್ನು ಸೇರಿಸುತ್ತದೆ. ಮನಸ್ಸಿಗೆ ಹತ್ತಿರವಾದವರು ಭಾವನೆಗಳ ಜಾಲದಲ್ಲಿ ಬಂಧಿಸಲ್ಪಡುತ್ತಾರೆ. ಇದು ಪ್ರೀತಿ, ವಿಶ್ವಾಸ, ಗೌರವಗಳ ಜಾಲ.

ಹತ್ತಿರವಾದವರು ಇನ್ನೆಂದೂ ಬರದಷ್ಟು ದೂರವಾದಾಗ, ಮಾನಸಿಕ ಭಾವನೆಗಳು ಕಾಡಲಾರಂಭಿಸುತ್ತವೆ, ದೇಹಗಳೂ ಸ್ಪಂದಿಸುತ್ತವೆ. ದುಃಖ ಕಣ್ಣೀರ ಮೂಲಕ ಹರಿದು ತಣ್ಣಗಾಗುತ್ತದೆ. ನೆನಪುಗಳು ಮಾತ್ರ ಮನಸ್ಸಿನಲ್ಲಿ ತಿರುಗುತ್ತದೆ,ಮನಃ ಪಟಲದಲ್ಲಿ ಚಿತ್ರಗಳು ಮೂಡಿ ಸುತ್ತುತಿದ್ದರೆಗಳನ್ನು ಭಾವನೆಗಳನ್ನ ಮತ್ತೆ ಮತ್ತೆ ಹಸಿರಾಗಿಸುತ್ತದೆ.


ಹಲವರು ಭಾವನೆಗಳ ಗಂಟನ್ನು ಅತ್ತು ಹೊರಹಾಕುತ್ತಾರೆ. ನನ್ನ ಭಾವನೆಗಳನ್ನು ಅಕ್ಷರಗಳಲ್ಲಿ ದಾಖಲಿಸಿ, ಶಾಶ್ವತ ನೆನಪಾಗಿಡುವ ಅಲ್ಪ ಪ್ರಯತ್ನ ನನ್ನದು.


ಇಲ್ಲಿ ಪೋಣಿಸಿರುವ ಪುಷ್ಪಗಳು ಒಂದೇ ಕ್ರಮವಾಗಿಲ್ಲ, ನೆನಪಾದಂತೆ ಸೇರಿಸಿಕೊಂಡು ಹೋಗಿದ್ದೇನೆ. ಕೆಲವು ಚಿಕ್ಕದು, ಕೆಲವು ಬಣ್ಣದ್ದು. ಅವರವರ ಆಸಕ್ತಿಗೆ ತಕ್ಕಂತೆ ಅವರಿಗೆ ಕೆಲವು ಇಷ್ಟವಾಗಬಹುದು-ಸ್ವೀಕರಿಸಬಹುದು, ಒಣಗಿದೆ ಎಂದು ಅನಿಸಿದ್ದನ್ನು ಬಿಟ್ಟು ಬಿಡಬಹುದು. ಇದು ನನ್ನ ಕಾಣ್ಕೆ. ದೃಷ್ಟಿಕೋನ-ಆಯಾಮ ಬದಲಾದಂತೆ ಚಿತ್ರಣವೂ ಬದಲಾಗಬಹುದು.


ಪ್ರಾಚೀನರ ಮಾತಿನಂತೆ- ಉತ್ತಮವಾದದನ್ನು ಸಂಗ್ರಹಿಸುವ ಪ್ರಯತ್ನ ಮಾಡಿದ್ದೇನೆ. ಸರಿಯಲ್ಲ ಅನಿಸಿದ್ದನ್ನು ಮೌನದಲ್ಲಿ ಕಟ್ಟಿದ್ದೇನೆ‌. ನೆನಪಾಗಿ ಇಷ್ಟವಾದದ್ದನ್ನು ಮಾತ್ರ ಪೋಣಿಸಿದ್ದೇನೆ.



ನನಗೆ ಜ್ಞಾಪಕ ಶಕ್ತಿ ತುಂಬ ಕಡಿಮೆ. ಬಾಲ್ಯದ ಆಟದ ವಯಸ್ಸಿನಲ್ಲಿ ಶಾಲೆಗೆ ರಜೆ ಸಿಕ್ಕಾಗ ಊರಿಗೆ ಹೋಗುತ್ತಿದ್ದೆ. ಪ್ರತೀ ವರ್ಷ ಪಾಸ್-ಫೈಲ್ ನ ದಿನ, ಪಾಸ್ ಎಂದು ತಿಳಿದು ಒಂದು ಹೊಸ ಚಡ್ಡಿ-ಅಂಗಿ ಟೈಲರ್ ಗೆ ಹೇಳಿ ಅಳತೆ ತೆಗೆದರೆ ಕೆಲವು ದಿನಗಳಲ್ಲಿ ಬಟ್ಟೆ ತಯಾರು.ಅಂದು ಸ್ನಾನ ಮಾಡಿ ಹೊಸ ಬಟ್ಟೆ ಹಾಕಿ, ಎಲ್ಲರ ಕಾಲು ಹಿಡಿದು ಸಂಭ್ರಮ.ಆಗ ದೊಡ್ಡಪ್ಪ ಎಂದರೆ ಸ್ವಲ್ಪ ಭಯ. ಏನಾದರೂ ಕಿತಾಪತಿ ಮಾಡಿದಾಗ ಬೈದದ್ದು, ಅಳುವಾಗ ಹಾಲ್ ನಲ್ಲಿ ಕೂಡಿ ಹಾಕಿ ಅಳು ನಿಂತ ಮೇಲೆ ಕರೆಯುವ ದೊಡ್ಡಪ್ಪ ಮಾತ್ರ ನೆನಪು. ಈ ತರಲೆಗಳನ್ನು ನನ್ನ ತಂದೆಯವರಲ್ಲಿ ಹೇಳುತ್ತಿದ್ದರಾ ಗೊತ್ತಿಲ್ಲ, ನನ್ನ ತಂದೆಯವರು ಯಾವತ್ತೂ ಕೇಳಿದ್ದಿಲ್ಲ. ಕೆಲವೊಮ್ಮೆ ಗೊತ್ತುಂಟು ಅಂತ ಸೂಚಿಸಿದ ಹಾಗೆ ಇದ್ದದ್ದೂ ಸುಳ್ಳಲ್ಲ. 


ನಮಗೆ ಊರಿನಲ್ಲೊಂದು ಅಂಗಡಿ. ಅಲ್ಲಿಂದ ಕದ್ದು ಬೆಲ್ಲ ತಿಂದಾಗ, ಚಾಕಲೇಟ್ ತೆಗೆದಾಗ, ಬೀಡಿ ಎಳೆದು ಸಿಕ್ಕಿ ಬಿದ್ದದ್ದು ತಿಳಿದಾಗ, ಬಲೂನು ಕದ್ದದ್ದು ಗೊತ್ತಾದಾಗ ಯಾವತ್ತೂ ಅವರು ನನಗೆ ಕೇಳಿದ್ದಿಲ್ಲ. ಅವರ ಮುಂದೆ ಹೋಗುವ ಧೈರ್ಯವೂ ಇರಲಿಲ್ಲ. ಇನ್ನೂ ಹೇಳಬೇಕಾದರೆ ನಾನು ಅವರ ಕಾಲು ನೋಡಿದಷ್ಟು ಮುಖ ನೋಡಲಿಲ್ಲ. 


ಸಂಜೆಯ ಹೊತ್ತಿಗೆ ಬಾವಿಯಿಂದ ಹತ್ತಿಪ್ಪತ್ತು ಕೊಡಪಾನ ನೀರು ಎಳೆದು ತೆಂಗಿನ ಸಸಿಗಳಿಗೆ ಹಾಕುವಾಗ ನಾನೂ ಜೊತೆಯಾಗುತ್ತಿದ್ದೆ. ಬಾವಿಯಿಂದ ನೀರು ಎಳೆಯುವುದನ್ನು ಕಲಿತದ್ದು ಅವರಿಂದಲೇ.


ಮಾತು ತುಂಬ ನಿಷ್ಠುರ. ಒಪ್ಪಿಗೆಯಗದೇ ಹೋದರೆ ಜಗಳವಾಡಿಯಾರು ಹೊರತು ಬಿಟ್ಟುಕೊಡುವುದಿಲ್ಲ.ಬಾಲ್ಯದ ಒಂದು ಘಟನೆಯ ಚಿಕ್ಕ ತುಣುಕು ನೆನಪಿದೆ. ದಿ. ನಾರಾಯಣ ಕಾಮತರು ನಮ್ಮ ಚಾರ್ಮಾಡಿ ಮನೆಗೆ ಬಂದಿದ್ದರು. ನಾಣ್ ಮಾಮ್ ಎಂದೇ ಎಲ್ಲರೂ ಕರೆಯುತ್ತಿದ್ದ ಇವರು ಧರ್ಮಸ್ಥಳದ ಯಕ್ಷಗಾನ ಮೇಳದ ವ್ಯವಸ್ಥಾಪಕರಾಗಿದ್ದವರು. ಇವರ ಮತ್ತು ನನ್ನ ದೊಡ್ಡಪ್ಪನ ನಡುವೆ ಯಾವುದೋ ಒಂದು ಪ್ರಸಂಗದ ಪಾತ್ರದ ಕುರಿತು ಚರ್ಚೆ ಆರಂಭವಾಗಿ ಸ್ವಲ್ಪ ತಾರಕಕ್ಕೆ ಏರಿತ್ತು. ಈ ಜಗಳ ಕಂಡು ಮಕ್ಕಳಾದ ನಾವು ತಬ್ಬಿಬ್ಬಾಗಿದ್ದೆವು. ತುಂಬು ಮನೆ, ಚಾವಡಿಯಲ್ಲಿ ಕೂತು ಮಾತುಕತೆ- ಚರ್ಚೆಗಳು, ಟಿ.ವಿ. ಇಲ್ಲದ ಕಾಲದಲ್ಲಿ ಸಾಮಾನ್ಯ ವಿಚಾರಗಳು.


ನಾನು ಯೌವನಕ್ಕೆ ಕಾಲಿಡುವಾಗ ಅವರಿಗೆ ಎಪ್ಪತ್ತರ ಆಸುಪಾಸು. ನನಗೆ ಅಲ್ಪ ಮೀಸೆ ಚಿಗುರಿದ ಮೇಲೆಯೇ ನಮ್ಮ ನಡುವೆ ಮಾತು ಎಂಬುದು ಸರಿಯಾಗಿ ನಡೆದದ್ದು. ಅಂಗಡಿಯಲ್ಲಿ ಕೂತಾಗ ಅಲ್ಲಿಯೇ ಅವರ ಪಕ್ಕದಲ್ಲಿ ನಿಂತರೆ ಅನೇಕ ವಿಷಯಗಳನ್ನು ಮಾತನಾಡುವವರು.ನಿಧಾನ ಗತಿ, ಮಾತಿನಲ್ಲಿ ಗಾಂಭೀರ್ಯ, ಚಿಕ್ಕ ವಿಷಯವಾದರೂ ಆಳವಾದ ಮನನ ದೊಡ್ಡಪ್ಪನವರ ವಿಶೇಷತೆ. ಯಕ್ಷಗಾನದ ಪಾತ್ರ-ತಪ್ಪು ಒಪ್ಪುಗಳ ಚಿಂತನವಾದ ಕಾರಣ ಕೊಂಕಣಿಯ ಬದಲಾಗಿ ಕನ್ನಡದಲ್ಲೇ ಮಾತನಾಡುತ್ತಿದ್ದರು. ನಡುವೆ ಲೌಕಿಕ ಬಂದರೆ ಆಗ ಕೊಂಕಣಿ! ದೃಷ್ಟಾಂತಗಳ ಮೂಲಕ ವಿವರಿಸುವ-ವಿಸ್ತರಿಸುವ ಶೈಲಿ. ಕೆಲವೊಮ್ಮೆ ಗಾದೆ ಮಾತುಗಳು-ತುಳುವಿನ ರೂಢಿ ಮಾತುಗಳು, ಆಟ-ಕೂಟಗಳಲ್ಲಿ ಕೇಳಿದ ಸಂಸ್ಕೃತದ ಶ್ಲೋಕಗಳು ಮಾತಿನ ನಡುವೆ ಸಾಗುತ್ತಿದ್ದವು. 


ಶಾಯಿ ಪೆನ್ನಿನ ನಿಬ್ ಉಳ್ಳ ಭಾಗವನ್ನು ತೆಗೆಯಲಾಗದೆ ಇದ್ದವರ ಕೈಗೆಲ್ಲ ಕೊಟ್ಟು, ಅವರು ಪ್ರಯತ್ನಿಸಿ, ಕೊನೆಗೆ ಯಾರದೋ ಒಬ್ಬರ ಕೈಯಲ್ಲಿ ಅದು ತೆರೆದಾಗ, ತೆರೆದವನು ಕೊನೆಯವನಾದರೂ ಅದರ ಹಿಂದಿನವರು ಹಾಕಿದ ಬಲದ ಪ್ರಭಾವವೂ ಇರುವಂತೆ,ಒಂದು ಸಣ್ಣ ಕಟ್ಟಿಗೆ ಒಡೆಯಲು ಸುಮಾರು ಹತ್ತು ಪೆಟ್ಟುಗಳು ಬೇಕು ಎಂದು ಊಹಿಸಿದರೆ, ಮೊದಲ ಒಂಭತ್ತು ಪೆಟ್ಟುಗಳು ಹತ್ತಿನ ಪೆಟ್ಟಿಗೆ ಪೂರಕವಾದರೂ ಕಟ್ಟಿಗೆ ಒಡೆಯುವುದು ಹತ್ತನೆಯ ಪೆಟ್ಟಿಗೆ. ಹಾಗೆಂದು ಹತ್ತನೆಯ ಪೆಟ್ಟನ್ನು ಮೊದಲೇ ಹೊಡೆಯಬರುವುದಿಲ್ಲವಲ್ಲ.

ಅಂತೆಯೇ ಈ ವಂಶದಲ್ಲಿ ಬೆಳೆದ ನನಗೆ ಉಪನಯನವಾದಾಗ ತಂದೆಯವರಿಂದ ಮಂತ್ರ ಉಪದೇಶವಾದರೆ, ಅದರ ಅರ್ಥದ ಅನಾವರಣ ಆದದ್ದು ದೊಡ್ಡ ತಂದೆಯವರಿಂದ. ಈ ಒಣ ಕಟ್ಟಿಗೆಗೆ ಒಡೆಯಲು ಪೆಟ್ಟು ಹಾಕಿದವರೆಷ್ಟು ಜನರೋ ಆದರೆ ಕೊನೆಯ ಹೊಡೆತಗಳು ಬಿದ್ದದ್ದು ದೊಡ್ಡಪ್ಪನವರಿಂದಲೇ. ಹಾಗೆಂದು ನಾನಿನ್ನೂ ಒಡೆದಿಲ್ಲ. ಒಡೆಯಲು ಬೇಕಾದ ಹೊಡೆತಗಳಿಗೆ ತಲೆ ಒಡ್ಡುತ್ತಲೇ ಇದ್ದೇನೆ. ಆದರೆ ಒಡೆಯಬೇಕು,ಒಡೆಯಲು ಹೊಡೆತ ಬೀಳಬೇಕು ಎಂಬ ಎಚ್ಚರ ಬಂದದ್ದು ದೊಡ್ಡಪ್ಪನವರು ನೀಡಿದ ಹೊಡೆತದಿಂದಲೇ ಎಂದು ತಿಳಿದೆ.

ಅಂದಿನಿಂದ ದೊಡ್ಡಪ್ಪ ಎಂದರೆ ಭಯವಲ್ಲ-ಗೌರವ. ಅವರು ದೊಡ್ಡ-ಅಪ್ಪ.


ನನ್ನ ಊರಾದ ಚಾರ್ಮಾಡಿಯಲ್ಲಿ ದಿನಪತ್ರಿಕೆಯ ಜೊತೆಗೆ ವಾರಪತ್ರಿಕೆ, ಚಂದಮಾಮಗಳು ತರಿಸುತ್ತಿದ್ದರು. ದಿ. ಕುಬಣೂರರ ಸಂಪಾದನೆಯ ಯಕ್ಷಪ್ರಭಾವನ್ನೂ, ಕುಬಣೂರು ರಾಯರನ್ನೂ ನಾನು ನೋಡಿದ್ದು ಅಲ್ಲಿಯೇ. ಕುಬಣೂರು ರಾಯರು ಅಂಗಡಿಯ ಬಳಿ ಕೂತು ಬಸ್ಸಿಗೆ ಕಾಯುವಾಗ ಅವರರೊಂದಿಗೆ ಏನಾದರೊಂದು ಮಾತು ಕತೆ ನಡೆಯುತ್ತಿದ್ದ ದಿನಗಳು ನೆನಪಿದೆ.


ಪ್ರಾಯಃ ಯಕ್ಷಗಾನದ ಸಂಬಂಧ ನಮ್ಮ ಹಳೆಯ ತಲೆಮಾರಿನ ಹೆಚ್ಚಿನವರನ್ನು ಅದರ ಪ್ರಭಾವಕ್ಕೆ ಒಳಪಡಿಸಿದೆ. ಚಾರ್ಮಾಡಿಯ ದೇವಸ್ಥಾನದಲ್ಲಿ ತಾಳಮದ್ದಳೆ ಕೂಟಕ್ಕೆ ಬಂದಿದ್ದ ದಿ. ಶೇಣಿಯವರನ್ನು ನಮ್ಮ ಮನೆಗೆ ಬರುವಂತೆ ಕರೆದಿದ್ದರಂತೆ ದೊಡ್ಡಪ್ಪ. ಚಾ ಕುಡಿದು ಸ್ವಲ್ಪ ಚರ್ಚೆ ಮಾಡಿ, ಪ್ರಶ್ನೆಗಳಿಗೆ ಉತ್ತರಿಸಿ ಹೋಗಿದ್ದರು ಎಂದು ದೊಡ್ಡಪ್ಪ ಹೇಳಿದ್ದರು. ದೊಡ್ಡಪ್ಪನವರಿಗೆ ದಿ.ಶೇಣಿಯವರೆಂದರೆ ತುಂಬ ಗೌರವ. ಅವರ ಜ್ಞಾನ, ಭಾಷೆಯ ಸೊಗಸು, ತಾರ್ಕಿಕ ಪ್ರತಿಪಾದನೆ, ಸ್ವರ ಭಾರಗಳನ್ನು ದೊಡ್ಡಪ್ಪನವರಿಂದ ಕೇಳಿದ ಮೇಲೆಯೇ ನಾನು ಕಂಡದ್ದು.

ದೊಡ್ಡಪ್ಪನವರು ಮಾತಿನ ನಡುವೆ ಉಲ್ಲೇಖಿಸುತ್ತಿದ್ದ ಕೆಲವು ವ್ಯಕ್ತಿಗಳಲ್ಲಿ ದಿ. ತೆಕ್ಮಟ್ಟೆಯವರು, ದಿ. ದೊಡ್ಡ ಸಾಮಗರು, ದಿ.ಪೆರ್ಲ ಭಟ್ಟರು ಕೆಲವರು. ಅವರಲ್ಲಿ ಯಕ್ಷಗಾನದ ಕೆಲವೊಂದು ಕ್ಯಾಸೆಟ್ ಗಳು ಇದ್ದವು, ಅದರಲ್ಲಿ ಶೇಣಿಯವರದ್ದೇ ಹೆಚ್ಚು. ಕೇಳಿದ್ದನ್ನೇ ಆದರೂ ಮತ್ತೆ ಮತ್ತೆ ಕೇಳುತ್ತಿದ್ದರು, ಅಲ್ಲಿ ಏನಾದರೊಂದು ಹೊಸ ವಿಷಯ ಸಿಗುತ್ತಿತ್ತು. 

ಅವರು ಮೆಚ್ಚುವ ಹರಿಕೀರ್ತನಕರರೆಂದರೆ ಭದ್ರಗಿರಿ ಅಚ್ಯುತದಾಸರು. ಹರಿಕಥೆಯ ಕೆಲವು ಕ್ಯಾಸೆಟ್ ಗಳೂ ಇದ್ದವು. ಆದರೆ ನಮಗೆ ಊರಿನಲ್ಲಿ ವಿದ್ಯುತ್ ಸೌಲಭ್ಯ ಇದ್ದರೂ ವಿದ್ಯುತ್ ಇರುವುದು ಕಡಿಮೆ. ಪೋಸ್ಟ್ ಆಫೀಸಿಗೊಂದು ಫೋನ್. ಮಳೆಗಾಲವನ್ನು ಬಿಟ್ಟರೆ ಉಳಿದ ಸಮಯ ಸರಿ ಇರುತ್ತಿತ್ತು. ಕರೆಂಟ್ ಇದ್ದಾಗ ನಮ್ಮಲ್ಲಿ ಟೇಪ್ ಕೂಗುವುದು ಸಾಮಾನ್ಯ. ಸುಪ್ರಭಾತ-ಅಭಂಗ-ದಾಸರಪದಗಳು, ಯಕ್ಷಗಾನಗಳು ಕೇಳಲು ಇರುತ್ತಿತ್ತು. ರಾತ್ರಿ ಕರೆಂಟ್ ಇದ್ದರೂ ಲೋ-ವೋಲ್ಟೇಜ್. ಉರಿಯದ ಬಲ್ಬು, ಕೆಲವೊಮ್ಮೆ ಜಿಗ್ಗನೆ ಉರಿದು ಆರುವವು. ಆಗ ಲಾಟನ್ ಉರಿಸಿ, ಅದರ ಗಾಜಿನ ಕರಿ ಒರೆಸುವುದು ದೊಡ್ಡಪ್ಪ. ಅಂಗಡಿಗೊಂದು ಗ್ಯಾಸ್ ಲೈಟ್. ಅದರ ಮೆಂಟಲ್ ಬದಲಾಯಿಸುವುದು, ಸರ್ವಿಸ್ ಮಾಡುವುದು ಅವರಿಗೆ ಸಲೀಸು.


ದಾರಿದೀಪ ಇಲ್ಲದ ಕಾಲದಲ್ಲಿ ಪ್ರಯಾಣದ ಕಷ್ಟ ಕಾಲವದು. ಕತ್ತಲಾದ ಮೇಲೆ ಯಾವ ವಾಹನವೂ ಸಿಗದಾಗ ನಡೆದು ಮನೆ ಸೇರಬೇಕಾಗಿತ್ತು. ಆಗಿನ ಅನುಭವದ ಭೂತ ಚೇಷ್ಟೆಯ ಕಥೆಗಳನ್ನು ಅವರು ಹೇಳುತ್ತಿದ್ದರು. ಅವರು ಮಾತ್ರ ಎಂತಹ ಭೂತಕ್ಕೂ ಹೆದರದ ಜನ ಎಂಬುದು ಖಾತ್ರಿ. ಆದರೆ ನಾನು ಮಾತ್ರ- ಕನ್ನಡಿಯ ಪ್ರತಿಬಿಂಬ ಬಿಟ್ಟು ಬೇರೆ ಯಾವ ಭೂತವನ್ನೂ ನೋಡಿಲ್ಲ.!


ಊರಿನಲ್ಲಿ ಕ್ಯಾರಂ-ಚದುರಂಗದ ಕಾಯಿಗಳಿದ್ದರೂ ದೊಡ್ಡಪ್ಪನವರು ಅದರ ಕಡೆ ಗಮನ ಹರಿಸಿದ್ದು ನಾನು ನೋಡಿಲ್ಲ. ಆದರೆ ಅವರು ನಡು ರಾತ್ರಿವರೆಗೂ ಕೂತು ಧಾಡ್-ಪೀಡ್ ಎಂದು ಆಡುತ್ತಿದ್ದ ಇಸ್ಪೀಟ್ ಆಟದ ಬಗ್ಗೆ ನನಗೆ ಈಗಲೂ ತಿಳಿದಿಲ್ಲ-ನೋಡಿದ್ದು ಮಾತ್ರ. ಇದು ಕೇವಲ ಮೋಜಿನ ಆಟವೇ ಹೊರತು ದುಡ್ಡು ಇಟ್ಟು ಆಡುವದಾಗಿರಲಿಲ್ಲ.



ನೇರ ನಿಷ್ಠುರದ ಸ್ವಭಾವ ಹೊಂದಿದ್ದ ದೊಡ್ಡಪ್ಪ, ಪ್ರೊ. ಕೆ.ಎಸ್.ನಾರಾಯಾಣಾಚಾರ್ಯರ, ದಿ.ಬನ್ನಂಜೆ ಗೋವಿಂದಚಾರ್ಯರ ಲೇಖನ-ಮಾತುಗಳಿಂದ ಪ್ರಭಾವಿತರು. ಕೆ‌.ಎಸ್ ರವರ ಆ ಹದಿನೆಂಟು ದಿನಗಳು ಪುಸ್ತಕ, ಬನ್ನಂಜೆಯವರ ಗೀತೆಯ ಬೆಳಕುಗಳು ಹುಚ್ಚು ಅವರ ಮೂಲಕ ನನಗೂ ಹಿಡಿಯಿತು. ಚಂದನ ವಾಹಿನಿಯ ಪಾವಗಡ ಪ್ರಕಾಶ ರಾಯರ ಸತ್ಯ ದರ್ಶನವು ಅವರ ಇಷ್ಟದ ಕಾರ್ಯಕ್ರಮ. ಕೋರ್ಟ್ ಕಲಾಪಗಳು, ಚರ್ಚೆ ಅವರಿಗೆ ಇಷ್ಟ. ಚಂದನದಲ್ಲಿ ಪ್ರಸಾರವಾಗುತ್ತಿದ್ದ ಮಾಯಾಮೃಗ ಧಾರಾವಾಹಿಯನ್ನು ನೋಡುತ್ತಿದ್ದರು. ನಿತ್ಯ ಪೇಪರ್ ಓದುವುದು, ತರಂಗದ ಆಯ್ದ ಲೇಖನಗಳ ನಿರಂತರ ಓದುಗ. ಕೆಲವೊಮ್ಮೆ ನನಗೂ ಕರೆ ಮಾಡಿ, ಇಂಥಹ ಲೇಖನ ಬಂದಿದೆ-ಓದು ಅಂತ ತಿಳಿಸುತ್ತಿದ್ದರು. ಇಳಿವಯಸ್ಸಿನಲ್ಲಿ ಅವರಿಗೆ ಫೋನ್ ನಲ್ಲಿ ಮಾತನಾಡಿದ್ದು ಸರಿಯಾಗಿ ಕೇಳಿಸುತ್ತಿರಲಿಲ್ಲವಾಗಿ, ಕಳೆದ ಏಪ್ರಿಲ್ ನಲ್ಲಿ ತನ್ನ ಮುಮ್ಮಗಳಿಗೆ ಹೇಳಿ ವಿಶ್ವವಾಣಿಯ ಅಂಕಣ ಓದುವಂತೆ ಅವನಿಗೆ ಹೇಳು ಎಂದು ತಿಳಿಸಿದ್ದರು.!


ನನ್ನಲ್ಲಿ ಆಸಕ್ತಿ ಕುದುರಿಸಿದ ಅವರು ಮೊದಲು ಹೇಳಿದ್ದು-ಮಂಕುತಿಮ್ಮನ ಕಗ್ಗದ ಬಗ್ಗೆ. ಚಿನ್ಮಯಾ ಮಿಷನ್ ನ ಸ್ವಾಮಿ ಬ್ರಹ್ಮಾನಂದರ ಮಾತುಗಳ ನಾಲ್ಕು ಕ್ಯಾಸೆಟ್ ನೀಡಿ- ಕೇಳು ಎಂದಿದ್ದರು. ಅಲ್ಲಿಂದ ತಿಮ್ಮಗುರುವಿನ ಎತ್ತರ ನನಗೆ  ಹತ್ತಿರವಾಯಿತು. 


ಕೇವಲ ಇಂಗ್ಲಿಷ್ ಮತ್ತು ಕನ್ನಡ ಬಲ್ಲ ದೊಡ್ಡಪ್ಪನವರಿಗೆ ಹಿಂದಿ ತಿಳಿಯುತ್ತಿರಲಿಲ್ಲ ಎಂದು ಅವರೇ ಹೇಳಿದ್ದರು. ಮಾತಿನ ನಡುವೆ ಕೆಲವೊಂದು ಶ್ಲೋಕಗಳನ್ನು ಹೇಳುತ್ತಿದ್ದರು. ಯಕ್ಷಗಾನದಲ್ಲಿ ಕೇಳಿದವು, ಲೇಖನ-ಪುಸ್ತಕಗಳಲ್ಲಿ ಓದಿದ ಮಾತುಗಳನ್ನು ಉಲ್ಲೇಖಿಸುತ್ತಿದ್ದರು. ಅವರ ಓದು ನಿಧಾನ. ಸ್ವಲ್ಪ ಓದಿ ಅದರ ಮೇಲೆ ಮನನ. ಸಮರ್ಪಕವೆನಿಸದಿದ್ದರೆ ಮುಂದೆ ಹೋಗುತ್ತಿರಲಿಲ್ಲ. ಮನನ ಮಾಡಿ ಕೊನೆಗೆ ಅದು ಆತ್ಯಂತಿಕ ಸತ್ಯದ ಚಿಂತನೆಗೆ ಸಾಗಿ ಓದು ಅಲ್ಲೇ ಬಾಕಿ.!


ಕುಮಾರ ವ್ಯಾಸ ಭಾರತದ ಕೆಲವೊಂದು ಪದ್ಯಗಳು ಅವರಿಗೆ ಕಂಠಸ್ಥ. ಅದನ್ನು ತಮ್ಮದೇ ಧಾಟಿಯಲ್ಲಿ ಹೇಳುವಾಗ ಕೇಳಲು ಸೊಗಸೆನಿಸುತ್ತಿತ್ತು. ಗದುಗಿನ ಭಾರತವನ್ನು ಓದಬೇಕೆನ್ನುವ ಪ್ರೇರಣೆಯಾಗಿತ್ತು. ಮುಂದೆ ಪ್ರಸಾರಾಂಗದಿಂದ ಪ್ರಕಟವಾದ ಒಂದು ಹೊತ್ತಗೆಯನ್ನು ಅವರಿಗೆ ಕೊಟ್ಟಿದ್ದೆ. ಇದಾಗಿ ಅನೇಕ ವರ್ಷಗಳ ಬಳಿಕ ಅವರು ನನಗೊ‌ಂದು ಹೊತ್ತಗೆ ನೀಡಿದರು-ಕುಮಾರ ವ್ಯಾಸ ಭಾರತ. ಮೊದಲ-ಕೊನೆಯ ಕೆಲವು ಹಾಳೆಗಳು ಹುಳ ತಿಂದಿದ್ದು, ನಡುವೆಯೂ ಪುಟಗಳು ಹಾಳಾಗಿದ್ದರೂ ಮೋಡಿ ಅಕ್ಷರದ ಅಚ್ಚಿನ ಹಳೆಯ ಪುಸ್ತಕ. ನನ್ನ ಅಜ್ಜನವರ ಕಾಲದಲ್ಲಿ ಕತ್ತಲಾಗುವ ಹೊತ್ತಿಗೆ ತಿಟ್ಟೆಯ ಮೇಲೆ ಕೂತು, ವಾಚನ ಮಾಡುತ್ತಿದ್ದಾಗ ಬಳಸುತ್ತಿದ್ದ ಪುಸ್ತಕ-ಸುಮಾರು ನೂರು ವರ್ಷ ಹಳೆಯ ಹಾಳೆಗಳು-ಅವರ ನೆನಪನ್ನು ಹಸಿರಾಗಿಸಲು ಇರುವ ಸಾಧನಗಳು.


ನನ್ನ ದೊಡ್ಡಪ್ಪನವರದ್ದು ಬಹಳ ಮುದ್ದಾದ ಕೈಬರಹ. ಇಂಗ್ಲಿಷ್-ಕನ್ನಡ ಎರಡೂ ಕೂಡ. ಆಗ ಅಂಗಡಿಯಲ್ಲಿ ಕೆಲವೊಮ್ಮೆ ಚಿಲ್ಲರೆ ಸಮಸ್ಯೆ ಎದುರಾದಾಗ ಇವರೇ ಸಿಗರೇಟ್ ಪ್ಯಾಕ್ ನ ಒಳಗಿನ ಕಾರ್ಡ್ ನಲ್ಲಿ ಎರಡು ರೂಪಾಯಿಯ ಒಕ್ಕಣೆ-ಸಹಿ ಹಾಕಿ ಕೊಡುತ್ತಿದ್ದರು. ಅದನ್ನು ಕೊಂಡು ಹೋದವನು ಮತ್ತೊಮ್ಮೆ ಬರುವಾಗ ಅದನ್ನು ತಂದರೆ ಹಣ ಅಥವ ವಸ್ತು ನೀಡುತ್ತಿದ್ದರು. ನನಗೆ ಅನಿಸಿತ್ತು- ಅವರೂ ಯಾರಾದರೂ ಹೀಗೆ ತಾವೇ ಬರೆದು ನಕಲು ಮಾಡಿ ತಂದರೆ..?

ಇವರ ಕೈಬರಹ-ಸಹಿಯನ್ನು ನಕಲಿಸುವುದು ಸುಲಭಸಾಧ್ಯವಲ್ಲ ಎಂಬ ಆತ್ಮವಿಶ್ವಾಸವೇ ಇಂಥಹ ಕಾರ್ಯಕ್ಕೆ ಅವರನ್ನು ಪ್ರೇರೇಪಿಸುತ್ತಿತ್ತು ಎಂಬ ಬಗ್ಗೆ ಎರಡು ಮಾತಿಲ್ಲ. ಆ ಹಳ್ಳಿಯಲ್ಲಿ ಇವರೊಬ್ಬ ವೈದ್ಯರೂ ಹೌದು. ಅಂಗಡಿಗೆ ಬಂದ ಎಷ್ಟೋ ಜನ-ಅಣ್ಣೆರೆ ಒಂಜಿ ಮಾತ್ರೆ ಕೊರ್ಲೆ ಎಂದಾಗ ಏನಾಗಿದೆ ಎಂದು ಲಕ್ಷಣ ಕೇಳಿ ಮಾತ್ರೆ ಕೊಡುತ್ತಿದ್ದರು. ದಶಮೂಲಾರಿಷ್ಟ-ಚಿನ್ನೆ ಮಾತ್ರೆಗಳನ್ನೂ ಕೊಡುತ್ತಿದ್ದರು. ಅಂಗಡಿಯಲ್ಲಿ ನಶ್ಯವೂ ಇತ್ತು, ಕೆಲವೊಮ್ಮೆ ತಾವೂ ಎಳೆಯುತ್ತಿದ್ದರು. ಅದೇನು ನಶೆಗಾಗಿ ಅಲ್ಲ, ಸೀನಿ- ಮೂಗು ಸ್ವಚ್ಛವಾಗಿಸಲು. ವ್ಯವಹಾರದಲ್ಲಿ ತುಳು-ಬ್ಯಾರಿ ಭಾಷೆಗಳನ್ನು ಸ್ಪಷ್ಟವಾಗಿ ಮಾತನಾಡಬಲ್ಲವರು. ಎಲ್ಲರನ್ನೂ ಮೊದಲೇ ಮಾತನಾಡಿಸುವ ಅವರು ರಾಮನ ಪಕ್ಷದವರು. 'ಯಾರು-ಅದ್ದುವಿನ ಮಗನಾ' ಎಂದು ಅಂಗಡಿಗೆ ಬಂದವರನ್ನು ತಿಳಿಯದಂತೆ ಪ್ರಶ್ನಿಸುತ್ತಿದ್ದರು. ಬಂದವರ ಮಕ್ಕಳ ಹೆಸರು ನೆನಪಾಗದಾಗ- ಮಗುವಿನಂತೆ 'ನನಗೆ ನೆನಪಾಗುವುದಿಲ್ಲ' ಎಂದು ಹೇಳುವವರು. 


ಜ್ಯೋತಿಷದ ಉಪಯೋಗದ ಬಗ್ಗೆ ಖಚಿತ ಅಭಿಪ್ರಾಯವಿತ್ತು ಅವರಿಗೆ. ಅವರು ಹೇಳುವಂತೆ ಜಾತಕ ಎನ್ನುವುದೊಂದು ಟಾರ್ಚ್ ನ ಹಾಗೆ ಅಗತ್ಯ ಬಿದ್ದಾಗ ಮಾತ್ರ ಹಾಕಬೇಕು ಹೊರತು ಪ್ರತಿಯೊಂದಕ್ಕೆ ಜಾತಕ ನೋಡುವುದಲ್ಲ.


ದೇವಸ್ಥಾನಗಳಿಗೆ ಹೋದಾಗ ವಿಗ್ರಹದ ಮುಂದೆ ಹೆಚ್ಚು ಹೊತ್ತು ಕೈಮುಗಿಯದವರಾದರೂ ತಮ್ಮ ಮನೆಯ ದೇವರಕೋಣೆಯಲ್ಲಿ ತುಂಬ ಹೊತ್ತು ಇರುತ್ತಿದ್ದರು. ನಮ್ಮ ಊರಿನ ಮನೆಯ ದೇವರ ಕೋಣೆ ಸ್ವಲ್ಪ ದೊಡ್ಡದೇ. ತಾನು ಮನೆ ಕಟ್ಟುವಂತಾದರೆ ಅದರಲ್ಲಿ ನಿನಗೊಂದು ಕೋಣೆ ಎಂದು ಹೇಳಿದ್ದರಂತೆ, ಅಂತೆಯೇ ಕಟ್ಟಿಸಿದ್ದರು. ನಮ್ಮ ದೇವರ ಮನೆಯಲ್ಲಿ ರುದ್ರದೇವರು ಚಿತ್ರದಲ್ಲಿದ್ದಾರೆ ಎಂಬುದು ವಿಶೇಷ. ಮನೆಗೆ ಪೂಜಾ ಕಾರ್ಯಗಳಿಗೆ ಬರುವ ಪುರೋಹಿತರಿಗೂ ಧಾರ್ಮಿಕತೆ, ಸಂಪ್ರದಾಯಗಳ ಬಗ್ಗೆ ಪ್ರಶ್ನೆ ಮಾಡಿ, ಕೊಟ್ಟ ಉತ್ತರ ಸಮರ್ಪಕ ಅನಿಸದಿದ್ದರೆ, ದಾಕ್ಣಿಣ್ಯವಿಲ್ಲದೆ ತಿಳಿಸಿ, ತನಗೆ ಅ‌ನಿಸಿದ್ದನ್ನು ಅವರಿಗೆ ಹೇಳುತ್ತಿದ್ದರು.ಅದರಲ್ಲೂ ಯಾವುದೋ ಒಂದು ವಿಧಿ ಅಥವ ನಿಷೇಧದ ವ್ಯಾಪ್ತಿಗೆ ಬಂದರೆ ಜಿಜ್ಞಾಸೆ ಹೆಚ್ಚು. ಯಾವುದೋ ವಿಷಯ ಇಷ್ಟವಾದರೆ ಅದನ್ನೂ ಹೊಗಳುತ್ತಿದ್ದರು, ಅದರ ಕುರಿತು ಎರಡು ಮಾತು ಹೇಳುತ್ತಿದ್ದರು. ಜುಟ್ಟು ಇರುವ ತೆಂಗಿನ ಕಾಯಿ ಬಳಸುವ ಕಾರಣದಿಂದ ಹಿಡಿದು ಪಿತೃಕಾರ್ಯದವರೆಗೆ ಅವರದ್ದೇ ಆದ ಕೆಲವೊಂದು ತರ್ಕಗಳಿದ್ದವು-ಸಮರ್ಥನೆಗಳಿದ್ದವು.

ಅದರಲ್ಲಿ ಕೊನೆವರೆಗೂ ಅವರಿಗೆ ಕನ್ವಿನ್ಸ್ ಆಗದ ಕೆಲವು ವಿಷಯಗಳೂ  ಇದ್ದವು. ಮುಖ್ಯವಾಗಿ ಏಕಾದಶಿಯಂದು ಶ್ರಾದ್ಧ ಮಾಡದ ಬಗ್ಗೆ ಜಿಜ್ಞಾಸೆ ಇತ್ತು.ಅವರಿಗೆ ಶ್ರಾದ್ಧದ‌, ಪಿತೃ ಆರಾಧನೆಯ ಬಗ್ಗೆ ವಿಶೇಷ ಶ್ರದ್ಧೆ. ವರ್ಷವೂ ತಂದೆ-ತಾಯಿಯ ಶ್ರಾದ್ಧಗಳು, ಪಿತೃ ಪಕ್ಷದಲ್ಲಿ ಕಾರ್ಯಗಳು ಚಾಚೂ ತಪ್ಪದೆ ನಡೆಯುತ್ತಿತ್ತು. ಅಂದು ತನ್ನ ಮನೆಯವರಿಗೆ ಮಾತ್ರವಲ್ಲದೆ, ಮೃತರಾದ ಸಂಬಂಧಿಕರಿಗೆ ಹೆಸರು ಹೇಳಿ ಪಿಂಡ-ತರ್ಪಣ ಇರುತ್ತಿತ್ತು.


ಭಗವದ್ಗೀತೆ ಅವರು ಮೆಚ್ಚಿದ ಗ್ರಂಥ. ಜೀವನದ ಎಲ್ಲ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಉತ್ತರವಿದೆ ಎಂದು ಎಲ್ಲರಿಗೂ ಹೇಳುತ್ತಿದ್ದರು. ತಮ್ಮ ಸಹಸ್ರಚಂದ್ರ ದರ್ಶನ ಕಾರ್ಯಕ್ರಮದಂದು ಬಂದವರಿಗೆ ಭಗವದ್ಗೀತೆಯ ಪುಸ್ತಕ ಕೊಟ್ಟು ಹರಸಿದ್ದರು. ಅವರ ಮಾತಿನಲ್ಲಿ ಎಂದೂ ಮಿನುಗುತ್ತಿದ್ದ ಮಾತೆಂದರೆ-ದೇವರಲ್ಲಿ ಜಗಳ. ದೇವರಲ್ಲೇ ಜಗಳ-"ಯಾವಾಗಲೂ ಮೈಗೆ ಗಂಧ ಹಚ್ಚಿದವರಲ್ಲೇ ಜಗಳ ಮಾಡಬೇಕು, ನಮ್ಮ ಮೈ ಗೆ ಗಂಧವೇ ಅಂಟುತ್ತದೆ. ಮೈಗೆ ಸೆಗಣಿ ಹಚ್ಚಿದವರಲ್ಲಿ ಕಚ್ಚಾಡಿದರೆ ಸೆಗಣಿಯೇ ತಾಗುವುದು."


ಅವರ ಮಾತುಗಳ ಪ್ರಭಾವ ನನ್ನ ಮೇಲೆ ಹೆಚ್ಚಾದಂತೆ ನಾನೂ ಅವರಂತೆ ಕಿವಿಯೋಲೆಗಳನ್ನು ಧರಿಸಿದ್ದೆ. ಅದನ್ನು ನೋಡಿ ಖುಷಿ ಪಟ್ಟ ಅವರು ಹೇಳಿದ್ದು- ಇದು ಚಿಕ್ಕದಾಯಿತು, ಸ್ವಲ್ಪ ದೊಡ್ಡದಾದರೆ ಚೆಂದ.!


ದೊಡ್ಡಪ್ಪಮವರದು ಗಡ್ಡ ಮೀಸೆ ಶೇವ್ ಮಾಡಿದ ನವಿರು ಮುಖ. ಇನ್ ಶರ್ಟ್ ಮಾಡಿ ಬೆಲ್ಟ್ ಸಹಿತ ಪ್ಯಾಂಟ್. ಅವರು ಬೆಳೆದ ಕಾಲದ ಡ್ರೆಸ್ಸಿಂಗ್. ಬಟ್ಟೆಗಳು ಹಾಗೆಯೇ ಇದ್ದು ಟ್ರಿಮ್ ಆಗಿರಬೇಕು ಎಂಬುದು ಅವರ ಅಂಬೋಣ. ಮನೆಯ ಕಾರ್ಯಕ್ರಮವಲ್ಲದೆ ಇತರೆಡೆಗಾದರೆ ಇದೇ ಡ್ರೆಸ್ ಕೋಡ್.ಮನೆಯಲ್ಲಿ ಅವರದು ಕೇಸರಿ ಮುಂಡು. ತಲೆಗೆ ಎಳ್ಳೆಣ್ಣೆ. ಹಾಗೆಯೇ ಕೈ ಕಾಲ್ಗಂಟುಗಳಿಗೂ ಸವರುತ್ತಿದ್ದರು.  ಅವರಿಂದ ನಾನೂ ಕಲಿತು ಅನುಸರಿಸುತ್ತಿರುವ ಅನೇಕ ವಿಚಾರಗಳಲ್ಲಿ ಇವೂ ಕೆಲವು. ೯೫ರ ಹರಯದಲ್ಲೂ ಅವರ ಕೂದಲು ಬಿಳಿಯಾಗಿತ್ತು ಹೊರತು ಬೋಳಾಗಿರಲಿಲ್ಲ. ಸಣಕಲು ಶರೀರಕ್ಕೆ ಸಕ್ಕರೆ ಖಾಯಿಲೆ ಬಂದಿರಲಿಲ್ಲ. ಮಿತ ಆಹಾರ, ರಾತ್ರಿ ಗಂಜಿ.


ನಿತ್ಯ ತುಳಸಿಗೆ ನೀರು ಹಾಕುವವರು, ನಮ್ಮ ಊರಿನ ಮನೆಯ ತುಳಸಿ ಕಟ್ಟೆಯೂ ಸ್ವಲ್ಪ ದೊಡ್ಡದೇ. ದೇವಸ್ಥಾನದ ಕಟ್ಟೆಯಂತೆ. ಅದು ಆಗ್ನೇಯ ದಿಕ್ಕಿನಲ್ಲಿತ್ತು. ಮನೆಗೆ ಬಂದ ಯಾರೋ ಹೇಳಿದ್ದರಂತೆ, 'ಅದು ಆಗ್ನೇಯ ದಿಕ್ಕು, ಅಲ್ಲಿ ತುಳಸಿ ಕಟ್ಟೆ ಇಡಬಾರದು' ಎಂದು. ಆಗ ಇವರೂ ಕೇಳಿದ್ದರು-' ನಮ್ಮ ಊರಿನ ದೇವಸ್ಥಾನ ಮತ್ತೂರು ಪಂಚಲಿಂಗೇಶ್ವರ. ಅಲ್ಲಿಯೂ ತುಳಸಿ ಕಟ್ಟೆ ಇರುವುದು ಆಗ್ನೇಯ ದಿಕ್ಕಿನಲ್ಲಿ!' ಹೀಗೆ ತುಂಬ ಪ್ರಾಕ್ಟಿಕಲ್ ಚಿಂತನೆ. ಆಗದೆಂದರೆ ಆಗುವುದೇ ಇಲ್ಲ. ವಿಷಯಾಧಾರಿತ ಚರ್ಚೆ ಬಿಟ್ಟು ಬೇರೆ ಯಾರೂ ಅವರೊಂದಿಗೆ ಏರುದನಿಯಲ್ಲಿ ಮಾತನಾಡಿದ್ದನ್ನು ನಾನು ನೋಡಿಲ್ಲ. ಅವರಾಡಿದ ಮಾತಿಗೆ ಭಿನ್ನಾಭಿಪ್ರಾಯವೇ ಆದರೂ ಅದನ್ನು ಹೇಳಲು ಮುಜುಗರಪಡುತ್ತಿದ್ದರೇ ಹೊರತು ಖಂಡಿಸಿದ್ದನ್ನು ನಾನು ನೋಡಿಲ್ಲ.


ನನ್ನ ಬಾಲ್ಯದಲ್ಲಿ ಅವರು ಮಾತನಾಡಿದ್ದು ನೆನಪಿಲ್ಲವಾದರೂ, ನಾನು ಕಾಣುವಾಗ ಅವರಿಗೆ ಜನರೇಶನ್ ಗ್ಯಾಪ್ ಎಂಬುದು ಇರಲಿಲ್ಲ. ಎರಡು ವರ್ಷದ ಮಗುವನ್ನೂ ಮಾತನಾಡಿಸುವ ಮಗು. ಚಿಕ್ಕಮಕ್ಕಳನ್ನು ತನ್ನ ತೊಡೆಯಲ್ಲಿ ಕೂಡಿಸಿ ಆಡಿಸುವುದು ಅವರಿಗೆ ಇಷ್ಟ. ಮುದುಕರ ಯೋಗ-ಕ್ಷೇಮ ವಿಚಾರಿಸುವ ಯುವಕ!. ತಂತ್ರಜ್ಞಾನದ ಬಗ್ಗೆ ಕೇಳುವ-ತರುಣ. ಕಾನೂನಿನ ಬಗ್ಗೆ ಮಾತಾನಾಡುವ ವಕೀಲ, ಕೃಷಿ-ವ್ಯವಹಾರ ಎಲ್ಲವನ್ನೂ ಮಾಡಿದ ವೈಶ್ಯ.ಹೋರಾಟ ಮಾಡಿದ ಕ್ಷತ್ರಿಯ.  ಹೀಗೆ ಅವರಿಗೆ ಹತ್ತು ಹಲವು ಮುಖ. ಎಲ್ಲರಲ್ಲೂ ಮಾತನಾಡಲು ಬೇಕಾದ ಮೂಲ ಜ್ಞಾನಕ್ಕೆ ಕೊರತೆ ಇರದ ಕಾರಣ, ಅವರಿಗೆ ಯಾವತ್ತೂ ಬೋರ್ ಅಂತ ಆಗಲಿಲ್ಲ. ತನ್ನವರ-ಮಕ್ಕಳ ವಿದ್ಯಾಭ್ಯಾಸ, ಉದರಂಭರಣಕ್ಕಾಗಿ ಅನೇಕ ವೃತ್ತಿಗಳನ್ನು ಮಾಡಿದವರು. ಎಲ್ಲರಿಗೂ ವಿದ್ಯೆ ಕೊಟ್ಟು ಕರ್ತವ್ಯ ನಿಭಾಯಿಸಿದವರು. 



ನಾನು ಮೇಲೆ ಹೊಗಳಿ ಬರೆದಂತೆ ಕಾಣುವ ವ್ಯಕ್ತಿ, ನನ್ನ ದೊಡ್ಡಪ್ಪ- ನಿಡಿಗಲ್ ಕಮಲಾಕ್ಷ ನಾಯಕ್.‌  ಬಾಬಣ್ಣ ನಾಯಕ್ ಮತ್ತು ಸರಸ್ವತಿ ಬಾಯಿಯವರ ಮೊದಲ ಪುತ್ರನಾಗಿ ೧೯೨೭, ಜೂನ್ ೨೧ ರಂದು ಜನನ. ಸರಸ್ವತಿ ಬಾಯಿಯವರು ತೀರಿಕೊಂಡಾಗ ಅಜ್ಜ ಇನ್ನೊಂದು ಮದುವೆಯಾದರು. ಅವರಲ್ಲಿ ಹುಟ್ಟಿದವರು ನನ್ನ ತಂದೆ. ಹಾಗಾಗಿ ನನ್ನ ದೊಡ್ಡಪ್ಪ ಮತ್ತು ತಂದೆಯವರಿಗೆ ಹತ್ತೊಂಭತ್ತು ವರ್ಷಗಳ ಅಂತರ. ಯೌವನಕ್ಕೆ ಬಂದ ದೊಡ್ಡಪ್ಪನಿಗೆ ಮದುವೆಯಾಗುವಾಗ ನನ್ನ ತಂದೆಯವರಿಗೆ ಐದು-ಆರು ವರ್ಷ ಅಂತ ದೊಡ್ಡಮ್ಮ ಹೇಳುತ್ತಿದ್ದರು. ಅಜ್ಜ ತೀರಿಕೊಂಡ ಮೇಲೆ ನನ್ನ ತಂದೆಯವರನ್ನು ತನ್ನ ಮಗನಂತೆ ನೋಡಿಕೊಂಡರು, ವಿದ್ಯಾಭ್ಯಾಸ ನೀಡಿದರು. ದೊಡ್ಡಪ್ಪನ ಮಕ್ಕಳಿಗೆ ಮತ್ತು ನನ್ನ ತಂದೆಯವರಿಗೆ ಹೆಚ್ಚೇನು ವಯೋ ವ್ಯತ್ಯಾಸ ಇಲ್ಲದ ಕಾರಣ ಅವರಿಗೆ ನನ್ನ ತಂದೆ ಚಿಕ್ಕಪ್ಪನಾದರೂ ಸಲಿಗೆ ಹೆಚ್ಚು. ನಮ್ಮದು ಚಿಕ್ಕ ಕುಟುಂಬ. ನೇರವಾಗಿ ದೊಡ್ಡಪ್ಪನ ಮಕ್ಕಳು, ಅವರ ತಮ್ಮನ ಮಕ್ಕಳು ಇಷ್ಟೇ. ತನ್ನ ಮಡದಿ, ಐದು ಮಕ್ಕಳು,ತನ್ನ ತಮ್ಮ, ಎಲ್ಲರ ಹೊಟ್ಟೆ-ಬಟ್ಟೆ, ವಿದ್ಯಾಭ್ಯಾಸ ನಿಭಾಯಿಸಿದ ಮೂರು ತಲೆಮಾರು ಕಂಡ ಹಿರಿಯ ಚೇತನ-ಆಷಾಢ ಮಾಸದ ದ್ವಾದಶಿಯಂದು ಬೆಳಕಿನೂರಿಗೆ‌ ಹೋರಡು ಹೋದರು. ಹೌದು ದಿವಂಗತರು. ಮೊನ್ನೆ ಮೊನ್ನೆಯವರೆಗೆ ಸಣಕಲು ದೇಹ ಹೊತ್ತು ನಮ್ಮೊಂದಿಗಿದ್ದ ಎಲ್ಲರ ಪ್ರೀತಿಯ ಅಜ್ಜ,ಪಿಜ್ಜ, ಚಿಕ್ಕಪ್ಪ, ಅಪ್ಪ, ಅಣ್ಣ,ಮಾವ, ಗಂಡ ಎಲ್ಲವೂ ಆಗಿದ್ದವರು- ತಮ್ಮ ತೊಂಭತ್ತೈದು ವರ್ಷದ ಸಾರ್ಥಕ ಜೀವನ ನಡೆಸಿ ಇಹಲೋಕ ತ್ಯಜಿಸಿದರು. ದೇಹಕ್ಕೆ ವಯಸ್ಸಾಗಿತ್ತು ನಿಜ. 


ಮಾತಿನ ನಡುವೆ ಅವರು ಅನೇಕ ಬಾರಿ ಉದಾಹರಿಸುತ್ತಿದ್ದ ಭಗವದ್ಗೀತೆಯ ಮಾತು-

ವಾಸಾಂಸಿ ಜೀರ್ಣಾನಿ ಯಥಾ ವಿಹಾಯ...| ಜೀರ್ಣವಾದ ಹಳೆ ಬಟ್ಟೆ ಕಳಚಿ, ಹೊಸ ಬಟ್ಟೆ ಉಡುವಂತೆಯೇ ಈ ಜೀವವು, ಹಳೆಯ ದೇಹ ಬಿಟ್ಟು ಹೊಸ ದೇಹ ತೊಡುತ್ತದೆ...


ಇದು ಕೇಳುವಾಗ ಹೌದು ಎಂದು ಕಂಡರೂ ಜೀವನದಲ್ಲಿ ಭಾವನೆಗಳ ನಂಟುಳ್ಳ ಮನುಷ್ಯನಿಗೆ ಆತ್ಮೀಯರು ಬಿಟ್ಟು ಹೋದಾಗ ಕಣ್ಣೀರು ಹಾಕದೇ ಇರುವುದು ಕಷ್ಣವಾಗಿ ಬಿಡುತ್ತದೆ. ಕೇಳಿದ ವೇದಾಂತದ ಮಾತುಗಳು ನೆನಪಾದರೂ ಅನುಭವದ ಮೂಸೆಯಲ್ಲಿ ಮುಳುಗದೇ ಕೇವಲ ಮೇಲ್ನೋಟದ ಜ್ಞಾನವಾಗಿ ಇದ್ದಾಗ ಇಂಥಹ ಅನುಭವ ಸಹಜವಾಗಿ ಅಳು ಹುಟ್ಟಿಸುತ್ತದೆ. ನನ್ನ ತಾಯಿಯವರು ಇಹಲೋಕ ತ್ಯಜಿಸಿದಾಗ ಅವರನ್ನು ನೋಡಲು ಬಂದ ಎಲ್ಲರೂ ಅತ್ತಿದ್ದರು, ದೊಡ್ಡಪ್ಪ ಅತ್ತಿರಲಿಲ್ಲ. ಆದರೆ ಅವರಿಗೆ ವಿಷಾದವಿತ್ತು. ಇನ್ನೂ ಬಾಳಬೇಕಾದ ಜೀವ, ಹೀಗಾಯಿತಲ್ಲ ಎಂದು ಅನಿಸಿತ್ತು. ಅವರ ತಮ್ಮ ಎಂದರೆ ನನ್ನ ತಂದೆಯವರು ಏಕಾಂಗಿಯಾದರಲ್ಲ ಎಂದು ಭಾವಿಸಿ ಅವನಿಗೆ ಇನ್ನೊಂದು ಮದುವೆಯಾಗುವಂತೆ ಸೂಚಿಸಿದ್ದರು.! 


ಪ್ರಾಯಕ್ಕೆ ಬಂದ ನಾವು ಯಾರೂ ಅದನ್ನು ಒಪ್ಪುವ ಸ್ಥಿತಿಯಲ್ಲಿರಲಿಲ್ಲ,ಅಥವ ಬೇರೆ ಬೇರೆ ಕಾರಣಗಳಿಂದ ಅದು ಈಡೇರಲಿಲ್ಲ. ಆದರೆ ನನ್ನ ತಂದೆಯವರು ಒಬ್ಬಂಟಿಗನಾಗಿ ಬದುಕಲಾರ ಎಂದು ಅವರಿಗೆ ಖಚಿತವಾಗಿ ತಿಳಿದಿತ್ತೋ ಏನೋ, ಅದಕ್ಕೇ ಇಂಥಹ ಸಲಹೆ ನೀಡಿದ್ದರು. ಸಮಾಜ ಒಪ್ಪುತ್ತದೋ-ಬಿಡುತ್ತದೋ ಇಂಥಹ ಕ್ರಾಂತಿಕಾರಿ ಸಲಹೆ ನೀಡುವ ಎದೆಗಾರಿಕೆ, ಕುಟುಂಬದ ಹಿರಿಯರ ಸ್ಥಾನದಲ್ಲಿ ನಿಂತು ಸೂಚನೆ ನೀಡುವ ಮನೋಸ್ಥೈರ್ಯ ಯಾರಿಗಿದೆ.?

ಇಂಥಹ ಹಿರಿಯ ಚೇತನ ನೂರು ಸಂವತ್ಸರಗಳನ್ನು ಕಾಣಬೇಕು ಎಂದು ಎಲ್ಲರ ಬಯಕೆಯಾಗಿತ್ತು. ಪ್ರಾಯಃ ಅವರ ಮಾರ್ಗದರ್ಶನ ಎಲ್ಲರಿಗೂ ಇನ್ನೂ ಬೇಕಾಗಿತ್ತು. ಕಣ್ಣೀರು ಆರದೇ, ಕಣ್ಣಿನಿಂದ ಹೊರಗೂ ಬಾರದೇ ಇರುವ ದುಃಖದ ಹಿಂದಿನ ನೋವಿನಲ್ಲಿ ಖಂಡಿತವಾಗಿ ಪಶ್ಚಾತ್ತಾಪವಿಲ್ಲ. ಬದಲಾಗಿ ನಮ್ಮಲ್ಲಿ ಇಂಥಹ ಇನ್ನೊಬ್ಬರಿಲ್ಲವಲ್ಲ ಎಂಬ ಕೊರಗು ಮಾತ್ರ ಇನ್ನೂ ಕಾಡುತ್ತಲೇ ಇದೆ-ಇದ್ದೇ ಇರುತ್ತದೆ.


ಶ್ರಾದ್ಧದ ಬಗ್ಗೆ ಅನನ್ಯ ಶ್ರದ್ಧೆ ಇದ್ದ ದೊಡ್ಡಪ್ಪ, ಗರುಡ ಪುರಾಣದಲ್ಲಿ ಇರುವ ವಿಚಾರಗಳನ್ನು ಒಪ್ಪುತ್ತಿರಲಿಲ್ಲ, ಅದೆಲ್ಲ ಭಯ ಹುಟ್ಟಿಸುವುದಕ್ಕಾಗಿ ಮಾಡಿದ ಸಾಹಿತ್ಯ ಎಂದೇ ಭಾವಿಸುತ್ತಿದ್ದರಾದರೂ ನಮ್ಮ ಸನಾತನ ಸಂಪ್ರದಾಯದಲ್ಲಿ ಅಗಲಿದ ಚೇತನಗಳಿಗೆ ಮಾಡುವ ಕಾರ್ಯಗಳು ಇವೆ. ಗರುಡ ಪುರಾಣದ ಅಧ್ಯಯನವನ್ನು ಈ ಸಮಯದಲ್ಲಾದರೂ ಮಾಡುವುದು ಉತ್ತಮ ಎಂದು ಭಾವಿಸಿ ಗರುಡ ಪುರಾಣದ ಪ್ರೇತ ಕಾಂಡದ ಚಿಂತನೆಯನ್ನು ಮುಂದಿನ ಒಂದು ವರ್ಷಗಳ ಕಾಲ ನಡೆಸಬೇಕೆಂದು ಸಂಕಲ್ಪಿಸಿದ್ದೇನೆ. ಪಿತೃ ದೇವತೆಗಳು ಅನುಗ್ರಹಿಸಲಿ, ದಾರಿ ತೋರಲಿ ಎಂದು ಪ್ರಾರ್ಥಿಸಿ, ಹಿರಿಯ ಚೇತನದ ಪಾದಪದ್ಮಗಳಿಗೆ ಇದು ಸಮರ್ಪಿತ. 


                         ಇತಿ-ಶ್ರೀ 


TELEGRAM LINK for Garuda Purana

https://t.me/joinchat/TVpLRuAwlYhBtstO